ಕೊಡಗಿನ ಅಭಿವೃದ್ಧಿಗೆ 1300 ಕೋಟಿಗೂ ಅಧಿಕ ಅನುದಾನ: ಶೀಘ್ರ ಶ್ವೇತಪತ್ರ ಬಿಡುಗಡೆ ಎಂದ ಶಾಸಕ ಬೋಪಯ್ಯ

ಹೊಸದಿಗಂತ ವರದಿ,ಮಡಿಕೇರಿ:

ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ವಿವಿಧ ಇಲಾಖೆಗಳಿಗೆ 851 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ಒಟ್ಟಾರೆಯಾಗಿ ಇದುವರೆಗೆ ಜಿಲ್ಲೆಯ ಅಭಿವೃದ್ಧಿಗೆ 1300 ಕೋಟಿ ರೂ.ಗಳಿಗೂ ಅಧಿಕ ಹಣ ಬಂದಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಗೆ ಯಾವುದೇ ಅನುದಾನ ಬಂದಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂಬ ವಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದರಲ್ಲದೆ, ಅವರುಗಳ ಅಪೇಕ್ಷೆಯಂತೆ ಜಿಲ್ಲೆಗೆ ಇದುವರೆಗೆ ಬಿಡುಗಡೆಯಾದ ವಿವಿಧ ಅನುದಾನಗಳ ಬಗ್ಗೆ ಉಭಯ ಕ್ಷೇತ್ರಗಳ ಶಾಸಕರು ಅತಿ ಶೀಘ್ರದಲ್ಲೇ ಶ್ವೇತಪತ್ರವನ್ನು ಬಿಡುಗಡೆ ಮಾಡಲಿರುವುದಾಗಿ ಘೋಷಿಸಿದರು.
ಮೇಲೆ ಹೇಳಲಾದ ಅನುದಾನದ ಮೊತ್ತದಲ್ಲಿ ಶಾಸಕರ‌, ಸಂಸದರ ನಿಧಿ ಹಾಗೂ ಎನ್.ಡಿ.ಆರ್.ಎಫ್ ಅನುದಾನಗಳು ಸೇರ್ಪಡೆಯಾಗಿಲ್ಲ. ಜಿಲ್ಲೆಯ ಎರಡೂ ಕ್ಷೇತ್ರಗಳಿಗೆ ತಮ್ಮ ಅಧಿಕಾರವಧಿಯಲ್ಲಿ ಬಿಡುಗಡೆಯಾಗಿರುವ ಅನುದಾನದ ಮೊತ್ತ 2ಸಾವಿರ ಕೋಟಿ ರೂ.ಗಳಿಗೂ ಮೀರಲಿದ್ದು, ಈ ಕುರಿತ ಅಧಿಕೃತ ಮಾಹಿತಿಯನ್ನು ಶಾಸಕರುಗಳು ಸಂಗ್ರಹಿಸುತ್ತಿದ್ದಾರೆ. ಅತಿ ಶೀಘ್ರದಲ್ಲಿ ಶ್ವೇತಪತ್ರದ ಮೂಲಕ ಅದನ್ನು ಬಹಿರಂಗಪಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಪ್ರಕೃತಿ ವಿಕೋಪ ಹಾಗೂ ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ 43,775 ಮಂದಿಗೆ ಇದುವರೆಗೆ 126.85 ಲಕ್ಷ ರೂ.ಗಳ ಬೆಳೆ ಹಾನಿ ಪರಿಹಾರವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಜಿಲ್ಲೆಯ ಸುಮಾರು 90 ಸಾವಿರಕ್ಕೂ ಅಧಿಕ ಮಂದಿ ರೈತರು ಹಾಗೂ ಬೆಳೆಗಾರರು ನಷ್ಟ ಪರಿಹಾಕ ಕೋರಿ ಅರ್ಜಿ ಸಲ್ಲಿಸಿದ್ದು, ಈ ಪೈಕಿ 2500ಕ್ಕೂ ಅಧಿಕ ಮಂದಿಯ ಅರ್ಜಿ ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿದೆ. ಉಳಿದ ರೈತರಿಗೆ ಇನ್ನೂ 137ಕೋಟಿ ರೂ.ಗಳಷ್ಟು ಹಣ ಬಿಡುಗಡೆಗೆ ಬಾಕಿಯಾಗಿದ್ದು, ಅತಿ ಶೀಘ್ರದಲ್ಲಿ ಈ ಮೊತ್ತ ಬಿಡುಗಡೆಯಾಗಲಿದೆ ಎಂದು ಬೋಪಯ್ಯ ಹೇಳಿದರು.
ಬೆಳೆ ನಷ್ಟಕ್ಕೊಳಗಾದ ರೈತರಿಗೆ ಹೆಕ್ಟೇರ್ ಒಂದಕ್ಕೆ ತಲಾ 36 ಸಾವಿರ ರೂ.ಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಲಿದ್ದು, ಇದಕ್ಕೆ ರಾಜ್ಯ ಸರಕಾರ 20 ಸಾವಿರ ರೂ.ಗಳನ್ನು ಸೇರಿಸಿ ಒಟ್ಟು 56 ಸಾವಿರ ರೂ.ಗಳ ಪರಿಹಾರ ನೀಡಲಾಗುತ್ತಿದೆ. ರಾಜ್ಯದಿಂದ ಪರಿಹಾರ ಬಿಡುಗಡೆಗೆ ಅಗತ್ಯವಿರುವ ಸುಮಾರು 50ಕೋಟಿ ರೂ.ಗಳಿಗೆ ಈ ಬಾರಿಯ ಅಧಿವೇಶನದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ಭೂಪರಿವರ್ತನೆ ನಿಯಮ ಸಡಿಲ: :ಕಳೆದ ಎರಡು ವರ್ಷಗಳ ಬಳಿಕ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕೊಡಗಿನ ಹಲವು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಹೆಚ್ಚಿನ ಸಮಸ್ಯೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಬೋಪಯ್ಯ ತಿಳಿಸಿದರು.
ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸಲು ಈಗಿರುವ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಆದರೆ ಸುಳ್ಳು ಮಾಹಿತಿ, ಸುಳ್ಳು ಪ್ರಮಾಣ ಪತ್ರ ನೀಡಿದರೆ ವಿಧಿಸಲಾಗುವ ದಂಡವನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.
ಹೊಸ ನಿಯಮದನ್ವಯ ಕೃಷಿ ಭೂಮಿಯನ್ನು ಮನೆ ಹಾಗೂ ಇತರ ಉದ್ದೇಶಗಳಿಗೆ ಬಳಸಲು ಅನುಮತಿ ಕೋರಿ ಸಲ್ಲಿಸುವ ಅರ್ಜಿಗಳನ್ನು ಒಂದು ವಾರದೊಳಗೆ ಇತ್ಯರ್ಥಪಡಿಸಲು ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಒಂದು ವಾರದೊಳಗೆ ಅರ್ಜಿ ವಿಲೇವಾರಿಯಾಗದಿದ್ದಲ್ಲಿ ‘ಡೀಮ್ಡ್ ಕನ್’ವರ್ಷನ್’ ಎಂದು ಪರಿಗಣಿಸಿ ಕಟ್ಟಡ ನಿರ್ಮಿಸಬಹುದು. ಆದರೆ ಈ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿ ಭೂ ಪರಿವರ್ತನೆ ಮಾಡಿರುವುದು ಕಂಡು ಬಂದಲ್ಲಿ ಅದಕ್ಕೆ ವಿಧಿಸಲಾಗುವ ದಂಡವನ್ನು ಒಂದು ಸಾವಿರ ರೂ.ಗಳಿಂದ ಒಂದು ಲಕ್ಷ‌ ರೂ.ಗಳಿಗೆ ಹೆಚ್ಚಿಸಲಾಗಿದೆ.ಅಲ್ಲದೆ ಸುಳ್ಳು ಪ್ರಮಾಣಪತ್ರ ನೀಡಿರುವ ಪ್ರಕರಣಗಳಲ್ಲಿ ಈಗಿರುವ ಎರಡೂವರೆ ಸಾವಿರ ರೂ.ಗಳ ದಂಡವನ್ನು 25ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಬೋಪಯ್ಯ ವಿವರಿಸಿದರಲ್ಲದೆ, ಈ ಬಗ್ಗೆ ಭೂ ಮಾಲಕರು ಹಾಗೂ ರೈತರು ಎಚ್ಚರವಹಿಸಬೇಕು ಎಂದು ಸಲಹೆ ಮಾಡಿದರು.
ಬಡ್ಡಿ ರಹಿತ ಕೃಷಿ ಸಾಲ: ರಾಜ್ಯದ ರೈತರಿಗೆ 3ಲಕ್ಷ ರೂ.ಗಳವರೆಗೆ ಬಡ್ಡಿರಹಿತ ಸಾಲ ನೀಡುವ ಯೋಜನೆಯನ್ನು ಕಾಫಿ ಬೆಳೆಗಾರರಿಗೂ ವಿಸ್ತರಿಸಬೇಕೆಂಬ ಕೊಡಗು ಡಿಸಿಸಿ ಬ್ಯಾಂಕ್ ಹಾಗೂ ಶಾಸಕರ ಬೇಡಿಕೆಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕರ್ನಾಟಕ ಕೃಷಿ ಸಾಲ ವ್ಯವಹಾರ ಮತ್ತು ಇತರ ಕಾಯ್ದೆ ವ್ಯಾಪ್ತಿಗೆ ಕಾಫಿ ಕೃಷಿಯನ್ನೂ ಸೇರಿಸಿ ಆ ಮೂಲಕ ಕಾಫಿ ಬೆಳೆಗಾರರಿಗೆ ನೆರವಾಗಲು ಸರಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.
ಉಚಿತ ವಿದ್ಯುತ್: ಕಾಫಿ ಬೆಳೆಗಾರರ 10ಹೆಚ್.ಪಿ.ವರೆಗಿನ ನೀರಾವರಿ ಪಂಪ್’ಸೆಟ್’ಗಳಿಗೆ ಉಚಿತ ವಿದ್ಯುತ್ ನೀಡಬೇಕೆಂಬ ಬೇಡಿಕೆಗೂ ಇಂಧನ‌ ಸಚಿವರು ಸ್ಪಂದಿಸಿದ್ದು, ಸಣ್ಣ ಬೆಳೆಗಾರರಿಗೆ ಮಾತ್ರ ಇರುವ ಈ ನಿಯಮವನ್ನು ಎಲ್ಲಾ ಬೆಳೆಗಾರರಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಅಲ್ಲದೆ ಪ್ರಸಕ್ತ ಕಾಫಿ ಬೆಳೆಗಾರರಿಂದ ಬರಬೇಕಿರುವ ಸುಮಾರು 48ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಮೊತ್ತವನ್ನು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಮನ್ನಾ ಮಾಡಲು ಸಚಿವರು ಒಪ್ಪಿದ್ದಾರೆ ಎಂದು ನುಡಿದರು.
ಒಟ್ಟಾರೆಯಾಗಿ ರಾಜ್ಯದಲ್ಲಿನ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರಗಳು ಕೊಡಗಿನ ಸಮಸ್ಯೆಗಳಿಗೆ ಸ್ಪಂದಿಸಿದ್ದು, ಜನಪರವಾದ ಆಡಳಿತ ನೀಡಿದ್ದಾರೆ ಎಂದು ಬೋಪಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!