ಲಂಕೆಯ ಅರಮನೆಯಿಂದ ಸಾವಿರಕ್ಕೂ ಅಧಿಕ ಅಮೂಲ್ಯ ವಸ್ತುಗಳು ಗಾಯಬ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾ ಅಧ್ಯಕ್ಷರ ಅರಮನೆ ಮತ್ತು ಪ್ರಧಾನಿಯವರ ಅಧಿಕೃತ ನಿವಾಸದಲ್ಲಿದ್ದ ವಿಂಟೇಜ್, ನೂರಾರು ಪ್ರಾಚೀನ ಕಲಾಕೃತಿಗಳ ಸಹಿತ ಬೆಲೆಬಾಳುವ ಸುಮಾರು ಒಂದು ಸಾವಿರಕ್ಕೂ ಅಧಿಕ ಪ್ರಾಚ್ಯವಸ್ತುಗಳು ನಾಪತ್ತೆಯಾಗಿವೆ! ಇವು ತಿಂಗಳಾರಂಭದಲ್ಲಿ ನಡೆದಿದ್ದ ಸರ್ಕಾರ ವಿರೋಧಿ ಪ್ರತಿಭಟನೆ ಸಂದರ್ಭ ಪ್ರತಿಭಟನಾಕಾರರ ಪಾಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶ ಕಂಡರಿಯದ ಆರ್ಥಿಕ ಬಿಕ್ಕಟ್ಟಿಗೆ ಸರಕಾರದ ಒಟ್ಟಾರೆ ಆಡಳಿತ ನೀತಿ ಕಾರಣವೆಂದು ಆರೋಪಿಸಿ, ಲಂಕಾದ ಪ್ರಜೆಗಳು ಜು.9ರಂದು ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಮತ್ತು ಮಾಜಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ನಿವಾಸಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.

ಸರಕಾರಕ್ಕೆ ಸೇರಿದ ಕಟ್ಟಡವೊಂದಕ್ಕೆ ಬೆಂಕಿ ಇಟ್ಟಿದ್ದರು. ಪ್ರತಿಭಟನೆ ಸಂದರ್ಭ ಅಧ್ಯಕ್ಷರ ಅರಮನೆ ಮತ್ತು ಪ್ರಧಾನಿ ನಿವಾಸದಿಂದ ಬರೋಬ್ಬರಿ ಒಂದು ಸಾವಿರಕ್ಕೂ ಅಧಿಕ ಬೆಲೆಬಾಳುವ ಪ್ರಾಚ್ಯವಸ್ತುಗಳನ್ನು ಪ್ರತಿಭಟನಾಕಾರರು ಲೂಟಿ ಮಾಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವೆಬ್ ಪೋರ್ಟಲ್ ಕೊಲಂಬೊ ಪೇಜ್ ಪ್ರಕಟಿಸಿದೆ.
ಈ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ.

ಇಲಾಖೆ ಬಳಿ ಮಾಹಿತಿ ಇಲ್ಲ!
ಅಧ್ಯಕ್ಷರ ಅರಮನೆ ಪುರಾತತ್ವ ಮಹತ್ವದ ಕೇಂದ್ರವೆಂದು ಪರಿಗಣಿಸಲಾಗಿದ್ದರೂ, ಇದರೊಳಗಿದ್ದ ವಿವಿಧ ಪ್ರಾಚೀನ ಕಲಾಕೃತಿಗಳು, ಅಮೂಲ್ಯ ಪ್ರಾಚ್ಯವಸ್ತುಗಳ ಬಗ್ಗೆ ಲಂಕಾದ ಪ್ರಾಚ್ಯವಸ್ತು ಇಲಾಖೆ ಬಳಿ ವಿವರವಾದ ದಾಖಲೆಗಳಿಲ್ಲ. ತನಿಖಾಧಿರಿಗಳ ತನಿಖೆಗೆ ಅಡ್ಡಿಯಾಗಿರುವುದು ಈ ನ್ಯೂನತೆ. ನಾಪತ್ತೆಯಾಗಿರುವ ಪ್ರಾಚ್ಯವಸ್ತುಗಳ ಸಂಖ್ಯೆ 1 ಸಾವಿರ ಎಂಬ ಪೊಲೀಸ್ ಅಂಕಿಅಂಶಗಳನ್ನೇ ಅಂತಿಮ ಎಂದು ಹೇಳಲಾಗದು ಅಥವಾ ಅರಮನೆಯಲ್ಲಿ ಇಂತಿಷ್ಟೇ ಕಲಾಕೃತಿಗಳು, ಪ್ರಾಚ್ಯವಸ್ತುಗಳಿದ್ದವು ಎಂದು ನಿಖರವಾಗಿ ಹೇಳಲಾಗದು ಎಂದು ಪ್ರಾಚ್ಯವಸ್ತು ಇಲಾಖೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!