ಮೈಸೂರು: ಗಾರೆ ಕೆಲಸ, ಕೂಲಿ ಕೆಲಸ ಮಾಡಿಕೊಂಡು ಶ್ರಮಪಟ್ಟು ಛಲದಿಂದ ಓದಿದ ವಿದ್ಯಾರ್ಥಿಯೊಬ್ಬ ಅದ್ಭುತ ಸಾಧನೆ ಮಾಡಿದ್ದಾರೆ. ಇದರಿಂದ ಶ್ರಮಮೇವ ಜಯತೇ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದಲ್ಲಿ ಈ ವಿದ್ಯಾರ್ಥಿಯು 14 ಚಿನ್ನದ ಪದಕ ಹಾಗೂ 3 ನಗದು ಬಹುಮಾನಗಳನ್ನು ಪಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಡು ಬಡತನದ ನಡುವೆ ಈ ಅಪೂರ್ವ ಸಾಧನೆ ಮಾಡಿದ ವಿದ್ಯಾರ್ಥಿ ಪಿ. ಮಹದೇವಸ್ವಾಮಿ. ನೆರೆಯ ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ದಿ.ಪುಟ್ಟಬಸವಯ್ಯ ಮತ್ತು ನಾಗಮ್ಮ ಅವರ ಪುತ್ರ. ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ವಿದ್ಯಾರ್ಥಿಯಾಗಿರುವ ಪಿ. ಮಹದೇವಸ್ವಾಮಿ ಬಡತನದಲ್ಲಿ ಅರಳಿದ ಪ್ರತಿಭೆ.
ತಂದೆ ನಿಧನರಾದ ನಂತರ ತಾಯಿ ಹಾಗೂ ಅಣ್ಣ ಕುಟುಂಬದ ಜವಾಬ್ದಾರಿ ಹೊತ್ತುಕೊಂಡರು. ಈ ಸಮಯದಲ್ಲಿ ಕಾಲೇಜಿಗೆ ಸೇರಿದ ಮಹದೇವಸ್ವಾಮಿ ರಜೆ ದಿನಗಳಲ್ಲಿ ಜೀವನ ನಿರ್ವಹಣೆಗೆಂದು ಗಾರೆ ಕೆಲಸ, ಕೂಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಚಿತ್ರಕಲೆಯಲ್ಲೂ ಆಸಕ್ತಿ ಇತ್ತು. ಎಂಎ ಕನ್ನಡದಲ್ಲಿ ಇವರಿಗೆ 2200 ಅಂಕಗಳಲ್ಲಿ 1963 ಅಂಕ ಲಭಿಸಿವೆ. ಮಳವಳ್ಳಿಯ ಭಗವಾನ್ ಬುದ್ಧ ಬಿಇಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಓದುತ್ತಿದ್ದಾಗ ಮೊದಲ ರ‍್ಯಾಂಕ್ ನೊಂದಿಗೆ 2 ಚಿನ್ನದ ಪದಕ ಮತ್ತು 2 ನಗದು ಬಹುಮಾನ ಪಡೆದಿದ್ದರು. ಇದೀಗ ಸಾಧನೆಯ ಮತ್ತೊಂದು ಘಟ್ಟ ತಲುಪಿದ್ದಾರೆ.
ಲೋಕಸೇವಾ ಪರೀಕ್ಷೆ ಮುಂದಿನ ಗುರಿ
ನಾನೀಗ ಕೆ-ಸೆಟ್ ಪರೀಕ್ಷೆ ಪಾಸು ಮಾಡಿಕೊಂಡಿದ್ದೇನೆ. ಮುಂದೆ ಯುಪಿಎಸ್ಸಿ ಅಥವಾ ಕೆಪಿಎಸ್ಸಿ ಮಾಡುವ ಆಸೆ ಇದೆ. ಐಎಎಸ್ ಹಾಗೂ ಕೆಎಎಸ್ ಗೆ ಉಚಿತ ತರಬೇತಿ ಸಿಕ್ಕರೆ ತುಂಬಾ ಅನುಕೂಲವಾಗುತ್ತದೆ ಎನ್ನುತ್ತಾ ತಮ್ಮ ಕನಸಿನ ಗರಿ ಬಿಚ್ಚಿಟ್ಟಿದ್ದಾರೆ ಮಹದೇವಸ್ವಾಮಿ.