ಉಚಿತ ವಿದ್ಯುತ್ತಿಗೆ ಒತ್ತಾಯ : ಸಿಎಂಗೆ ಮನವಿ ಸಲ್ಲಿಸಿದ ಕೊಡಗು ರೈತ ಸಂಘ

ಮಡಿಕೇರಿ: ಕೊಡಗು ಜಿಲ್ಲೆಯ ರೈತರಿಗೆ 10 ಎಚ್.ಪಿ.ವರೆಗೆ ಉಚಿತವಾಗಿ ವಿದ್ಯುತ್ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದೆ.

ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಖುದ್ದು ಭೇಟಿ ಮಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮತ್ತು ಪದಾಧಿಕಾರಿಗಳು ಜಿಲ್ಲೆಯ ರೈತರು ಅನುಭವಿಸುತ್ತಿರುವ ತೊಂದರೆ ಬಗ್ಗೆ ಗಮನ ಸೆಳೆದರು.

ರಾಜ್ಯದ ಹಲವಾರು ಜಿಲ್ಲೆಯಲ್ಲಿ ರೈತರಿಗೆ 10 ಎಚ್.ಪಿ. ವಿದ್ಯುತ್ ಉಚಿತವಾಗಿ ಲಭ್ಯವಾಗುತ್ತಿದೆ. ಆದರೆ ಕೊಡಗು ಜಿಲ್ಲೆಯ ರೈತರು ಇದರಿಂದ ವಂಚಿತರಾಗಿದ್ದಾರೆ. ರೈತ ಸಂಘವು ಹಲವು ಬಾರಿ ಈ ಬಗ್ಗೆ ಹೋರಾಟ ನಡೆಸಿ ಸರಕಾರದ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಾರಿಯ ಅಧಿವೇಶನದಲ್ಲಿ ರೈತರ ಹಲವು ವರ್ಷಗಳ ಬೇಡಿಕೆಯ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಮನು ಸೋಮಯ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಕೊಡಗಿನ ರೈತರು ಹೆಚ್ಚಾಗಿ ಕಾಫಿ ಹಾಗೂ ಕರಿಮೆಣಸು ಬೆಳೆಯುತ್ತಾರೆ. ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಮಾತ್ರ ರೈತರು ಬೆಳೆಗಳಿಗೆ ನೀರನ್ನು ಬಳಕೆ ಮಾಡುತ್ತಾರೆ. ಉಳಿದ ಸಮಯದಲ್ಲಿ ನಮಗೆ ವಿದ್ಯುತ್ ಆವಶ್ಯಕತೆ ಇರುವುದಿಲ್ಲ, ಹೀಗಾಗಿ ಉಚಿತ ವಿದ್ಯುತ್ ನೀಡುವುದು ಸರಿಯಾದ ಕ್ರಮವಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿಗಳು ಸ್ಪಂದಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪದಾಧಿಕಾರಿಗಳಾದ ಆಲೆಮಾಡ ಮಂಜುನಾಥ್, ರಾಯ್ ಮಾದಪ್ಪ, ತೀತರಮಾಡ ರಾಜ, ಮಂಡೇಪಂಡ ಪ್ರವೀಣ್ ಮುಂತಾದವರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!