ಅತ್ಯಂತ ದುಬಾರಿ ಮಾವಿನ ಹಣ್ಣಿದು – ಜಪಾನಿನ ಮಿಯಾಜಾಕಿ ಮಾವಿನ ಬೆಲೆ ಎಷ್ಟು ಗೊತ್ತೇ?

ಮಂಜುನಾಥ ಗಂಗಾವತಿ

ಕೊಪ್ಪಳ: ಒಂದು ಕೆ.ಜಿ. ಮಾವಿನ ಹಣ್ಣಿಗೆ 100-200ರೂ. ಕೊಟ್ಟು ಮನೆಗೆ ತಂದು ಸವಿದವರೂ ಇದ್ದಾರೆ. ಇನ್ನೂ ಹೆಚ್ಚು ತುಟ್ಟಿಯ ಮಾವಿನ ರುಚಿ ಸವಿದವರೂ ಇರಬಹುದು. ಆದರೆ, ಇಲ್ಲೊಂದು ಮಾವಿನ ಹಣ್ಣಿನ ಪ್ರತಿ ಕೆ.ಜಿ.ಗೆ ಬೆಲೆ 2.50 ಲಕ್ಷ ರೂ.!

ಲಕ್ಷಾಂತರ ರೂ. ಬೆಲೆಯ ಈ ಮಾವು ಹಣ್ಣಿನ ಹೆಸರೇ ಮಿಯಾಜಾಕಿ. ಈ ಮಾವು ಆಗ್ನೇಯ ಏಷ್ಯಾದಲ್ಲಿ ಬೆಳೆಯುವ ಹಳದಿ ಪೆಲಿಕನ್ ಮಾವುಗಿಂತ ಭಿನ್ನವಾಗಿರುವ ಇರ್ವಿನ್ ಮಾವಿನ ಒಂದು ವಿಧವಾಗಿದೆ. ಇದು ಜಪಾನ್ ದೇಶದಲ್ಲಿ ಬೆಳೆಯಲಾಗುತ್ತಿದ್ದು, ಭಾರತದ ಮಧ್ಯಪ್ರದೇಶದಲ್ಲಿ ಎರಡು ಗಿಡ ನೆಡಲಾಗಿದೆ. ಈ ಹಣ್ಣು ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆ ಏರ್ಪಡಿಸಿದ್ದ ಮಾವು ಮೇಳದಲ್ಲಿ ಆಕರ್ಷಣೀಯವಾಗಿ
ಕಂಡು ಬಂದಿದ್ದು, ಈ ಮಾವನ್ನು ನಮ್ಮಲ್ಲಿಯೂ ಬೆಳೆಯಬಹುದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು.

ಮಿಯಾಜಾಕಿ ಮಾವು ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿದ್ದು, ಕಳೆದ ವರ್ಷ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂಗೆ 2.70 ಲಕ್ಷಕ್ಕೆ ಮಾರಾಟವಾಗಿದೆ. 70ರ ದಶಕದ ಉತ್ತರಾರ್ಧದಲ್ಲಿ ಮತ್ತು 80ರ ದಶಕದ ಆರಂಭದಲ್ಲಿ ಮಿಯಾಜಾಕಿಯಲ್ಲಿ ಮಾವಿನ ಹಣ್ಣುಗಳ ಉತ್ಪಾದನೆಯು ಪ್ರಾರಂಭವಾಯಿತು. ಜಪಾನಿನ ಬೆಚ್ಚನೆಯ ವಾತಾವರಣ, ದೀರ್ಘಾವಧಿಯ ಸೂರ್ಯನ ಬೆಳಕು ಮತ್ತು ಹೇರಳವಾದ ಮಳೆಯಿಂದ ಮಿಯಾಜಾಕಿ ತಳಿಯ ಮಾವನ್ನು ಬೆಳೆಯಬಹುದು.

ಪ್ರತಿ ಮಾವು ಸುಮಾರು 350 ಗ್ರಾಂ ತೂಗುತ್ತದೆ. ಸುಂದರವಾದ ಕೆಂಪು ಬಣ್ಣ ಹೊಂದಿರಲಿದೆ. ಇದು ನೋಟದಲ್ಲಿ ಡೈನೋಸಾರ್ ಮೊಟ್ಟೆಯನ್ನು ಹೋಲುತ್ತದೆ. ಮಿಯಾಜಾಕಿ ಮಾವಿನ ಉರಿಯುತ್ತಿರುವ ಕೆಂಪು ಬಣ್ಣದಿಂದಾಗಿ, ಡ್ರ್ಯಾಗನ್ ಮೊಟ್ಟೆ ಎಂದೂ ಕರೆಯುತ್ತಾರೆ. ಈ ತಳಿಯ ಮಾವನ್ನು ರೈತರು ಬೆಳೆದು ಆದಾಯ ಪಡೆಯಬಹುದು ಎಂಬ ಉದ್ದೇಶದಿಂದಲೇ ಈ ಮಾವನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾವು ಮೇಳದಲ್ಲಿ ಪ್ರದರ್ಶಿಸಿದರು.

ಎ ಗ್ರೇಡ್ ಮಾವಿಗೆ ಬೆಲೆ ಜಾಸ್ತಿ:

ಮಿಯಾಜಾಕಿ ಮಾವಿನ ಗಿಡದಲ್ಲಿ ಬಿಡುವ ಮಾವು ಎ ಗ್ರೇಡ್ ಹೊಂದಿದ್ದರೆ ಬೆಲೆ ಜಾಸ್ತಿ ಇರಲಿದೆ. ಈ ಗಿಡದಲ್ಲಿ ಶೇ.10 ರಷ್ಟು ಮಾತ್ರ ಎ ಗ್ರೇಡ್ ಮಾವು ಬೆಳೆಯಬಹುದು. 350 ಗ್ರಾಮ್ ಹಾಗೂ ಬಣ್ಣ ಹೊಂದಿದ್ದರೆ ಎ ಗ್ರೇಡ್ ಎನ್ನಲಾಗುತ್ತದೆ. ಒಂದು ಸಸಿಯ ಬೆಲೆ 12 ಸಾವಿರ ರೂ. ಇದೆ ಎಂದು ಅಧಿಕಾರಿಗಳು ತಿಳಿಸಿದರು.

ಮಿಯಾಜಾಕಿ ಹಣ್ಣಿನ ವಿಶಿಷ್ಟತೆಗಳು:

* ಜಗತ್ತಿನಲ್ಲೇ ಹೇರಳವಾಗಿ ಸಿಗುವ ಹಣ್ಣು.
* ಸಾಮಾನ್ಯ ಮಾವಿನ ಹಣ್ಣಿನಂತೆ ಇರಲ್ಲ.
* ಮಿಯಾಜಾಕಿ ಹಣ್ಣಿನ ಬಣ್ಣ ಕಡುಗೆಂಪು
* ಒಂದು ಹಣ್ಣಿನ ತೂಕ 350 ಗ್ರಾಮ್ ನಷ್ಟು ಇರಲಿದೆ.
* ಇತರೆ ಮಾವಿಗಿಂತ ಶೇ. 15 ರಷ್ಟು ಶುಗರ್ ಕಂಟೆಂಟ್ ಅಧಿಕ.
* ಈ ಹಣ್ಣುಗಳಲ್ಲಿ ಬೇಟಾ ಕ್ಯಾರೊಟೇನ್ ಮತ್ತು ಆ್ಯಂಟಿ ಆಕ್ಸಡೆನ್ಸ್ ರಿಚ್ ಆಗಿರಲಿದೆ.
* ಏಪ್ರಿಲ್ ಮತ್ತು ಆಗಸ್ಟ್ ನಡುವಿನ ಸಮಯದಲ್ಲಿ ಫಸಲು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!