ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ನಂತರ ಎಲ್ಲಾ ಗ್ಯಾರೆಂಟಿ ಯೋಜನೆಗಳು ಭಾಗಶಃ ಬಂದ್ ಆಗಲಿವೆ, ಏಳು ವರ್ಗಗಳ ಜನರನ್ನು ಈ ಯೋಜನೆಗಳ ವ್ಯಾಪ್ತಿಯಿಂದ ಕೈ ಬಿಡಲು ಹಣಕಾಸು ಇಲಾಖೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ದೂರಿದ್ದಾರೆ.
ಅಷ್ಟೇ ಅಲ್ಲದೆ ವಿವಿಧ ಜಾತಿಯ ನಿಗಮಗಳಿಗೆ ಹಣ ಕಡಿತಗೊಳಿಸಿ ಅಲ್ಪಸಂಖ್ಯಾತರಿಗೆ ಹಂಚಿಕೆ ಮಾಡಿದ್ದಾರೆ. ಸಿಎಂ ತಾವು ಹಿಂದುಳಿದ ವರ್ಗಗಳು,ಎಸ್‌ಸಿ, ಎಸ್‌ಟಿಗಳ ಪರ ಎಂದು ಬಾಯಿ ಮಾತಿಗೆ ಹೇಳಿದ್ದಾರೆ. ವಾಸ್ತವದಲ್ಲಿ ಈ ಸಮುದಾಯಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಉದಾಹರಣೆ ಇದೆ, ಬಸವರಾಜ ಬೊಮ್ಮಾಯಿ ಅವರ ಬಜೆಟ್‌ನಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 60 ಕೋಟಿ ರೂಪಾಯಿ ಮಂಜೂರು ಮಾಡಿದ್ದರು. ಇದೀಗ ಸಿದ್ದರಾಮಯ್ಯ ಅವರು 40 ಕೋಟಿಗೆ ಇಳಿಕೆ ಮಾಡಿದ್ದಾರೆ ಎಂದಿದ್ದಾರೆ.
ಚುನಾವಣೆ ಮುಗಿಯುತ್ತಿದ್ದಂತೆಯೇ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಸರಕಾರದ ಹೊರಗುತ್ತಿಗೆ ಮತ್ತು ಗುತ್ತಿಗೆ ನೌಕರರು, ಅತಿಥಿ ಶಿಕ್ಷಕರು, ಗ್ರಾಮ ಸಹಾಯಕರು, ವಾರ್ಷಿಕ ಕುಟುಂಬದ ಆದಾಯ 1.2 ಲಕ್ಷ ರೂ.ಗಿಂತ ಹೆಚ್ಚಿರುವವರು, ನಾಲ್ಕು ಚಕ್ರಗಳ ವಾಹನ ಹೊಂದಿರುವವರು, ವೃತ್ತಿಪರ ತೆರಿಗೆ ಪಾವತಿದಾರರು, 5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವ ರೈತರು ಸೇರಿ ನಾನಾ ವರ್ಗಗಳ ಜನರನ್ನು ಗ್ಯಾರಂಟಿ ಯೋಜನೆಗಳ ವ್ಯಾಪ್ತಿಯಿಂದ ಹೊರಗಿಡಲು ತಯಾರಿ ನಡೆದಿದೆ ಎಂದು ದೂರಿದ್ದಾರೆ.