ಹೊಸದಿಗಂತ ಮಂಗಳೂರು:
‘ಲಂಡನ್ ವೈದ್ಯ’ನೋರ್ವನ ಹೆಸರಲ್ಲಿ ಉಡುಪಿ ಜಿಲ್ಲೆಯ ಮಹಿಳೆಯೋರ್ವರಿಗೆ ಲಕ್ಷಾಂತರ ರೂ.ಗಳ ವಂಚನೆ ನಡೆದಿದ್ದು, ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಂಕನಿಡಿಯೂರು ನಿವಾಸಿ ವಿನೀತಾ ಎಂಬವರು ಖಾಸಗಿ ಸಂಸ್ಥೆಯೊಂದರ ಪಾಲುದಾರರಾಗಿ ಕೆಲಸ ಮಾಡಿಕೊಂಡಿದ್ದಾರೆ. ಈ ನಡುವೆ ಅವರಿಗೆ ಅಪರಿಚಿತ ವ್ಯಕ್ತಿಯೋರ್ವ ಪರಿಚಯವಾಗಿದ್ದು, ಆತ ತಾನು ಲಂಡನ್‌ನಲ್ಲಿ ವೈದ್ಯ ಎಂದು ಹೇಳಿಕೊಂಡಿದ್ದ.
ಅದಾಗಿ ಒಂದಿಷ್ಟು ದಿನಗಳ ಬಳಿಕ ವಾಟ್ಸಾಪ್ ಚಾಟ್‌ನಲ್ಲಿ ತಾನು ಭಾರತಕ್ಕೆ ಬರುವುದಾಗಿ ಕೂಡಾ ಹೇಳಿದ್ದ. ಈ ನಡುವೆ ವಿನಿತಾ ಅವರಿಗೆ ಮತ್ತೊಂದು ಅಪರಿಚಿತ ನಂಬರ್‌ನಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ದಿಲ್ಲಿ ಏರ್ಪೋರ್ಟ್ ಅಥಾರಿಟಿಯ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾನೆ.
ನಿಮ್ಮ ಸ್ನೇಹಿತ ನಮ್ಮ ಕಸ್ಟಡಿಯಲ್ಲಿದ್ದಾರೆ. ಇವರನ್ನು ಬಿಡುಗಡೆ ಮಾಡಬೇಕಾಗಿದ್ದರೆ ದಂಡ ಕಟ್ಟಬೇಕು ಎಂದಿದ್ದಾನೆ. ಈ ಘಟನೆಯಲ್ಲಿ ಸರ್ಕಾರ ತನ್ನ ಮೇಲೆ ಕ್ರಮ ತೆಗೆದುಕೊಳ್ಳಬಹುದು ಎಂಬ ಭೀತಿಯಲ್ಲಿ ವಿನಿತಾ ಫೆ.16 ರಿಂದ 20ರ ತನಕ ಒಟ್ಟು 4,96,000 ರೂ. ಹಣವನ್ನು ಕೆನರಾ ಬ್ಯಾಂಕ್ ಖಾತೆ, ಪೋನ್‌ಪೇ ಮೂಲಕ ಆಗಂತುಕನಿಗೆ ವರ್ಗಾಯಿಸಿದ್ದಾರೆ. ಬಳಿಕ ಅವರಿಗೆ ಇಂದು ವಂಚಕರ ಜಾಲ ಎಂಬುದು ಅರಿವಾಗಿದೆ.
ಇದೀಗ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಮಲ್ಪೆ ಪೊಲೀಸರು ‘ಲಂಡನ್ ವೈದ್ಯ’ ಹಾಗೂ ‘ಏರ್ಪೋರ್ಟ್ ಅಥಾರಿಟಿ ಸಿಬ್ಬಂದಿ’ಗಾಗಿ ಬಲೆ ಬೀಸಿದ್ದಾರೆ.