ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯಿಯೊಬ್ಬರು ತನ್ನ 4 ವರ್ಷದ ಹೆಣ್ಣುಮಗುವನ್ನು ಹಿಡಿದುಕೊಂಡು ಬಾವಿಗೆ ಹಾರಿದ ಹಾಗೂ ಅದೃಷ್ಟವಶಾತ್ ಮಗು ಬದುಕುಳಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ಸಂಭವಿಸಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ದಯಾನಂದ ಎಂಬವರ ಪತ್ನಿ ಸುಳ್ಯದ ಕಾಲೇಜೊಂದರಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದ ಗೀತಾ (34) ಎಂಬವರು ಬುಧವಾರ ಮುಂಜಾನೆ ತನ್ನ 4 ವರ್ಷದ ಮಗಳು ಪೂರ್ವಿಕಾಳೊಂದಿಗೆ ಬಾವಿಗೆ ಹಾರಿದ್ದರೆನ್ನಲಾಗಿದೆ.
ಮುಂಜಾನೆ ಗೀತಾ ಅವರು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಮನೆಯವರು ಹುಡುಕಾಡಿದಾಗ ಗೀತಾ ಮತ್ತು ಮಗು ಬಾವಿಯಲ್ಲಿ ಬಿದ್ದಿರುವುದು ಕಂಡುಬಂತು. ಮಗು ಪೂರ್ವಿಕಾ ಬಾವಿಯೊಳಗೆ ಇದ್ದ ಕಲ್ಲನ್ನು ಹಿಡಿದುಕೊಂಡು ಬದುಕುಳಿದಿದ್ದು, ತಕ್ಷಣ ಆಕೆಯನ್ನು ಮೇಲಕ್ಕೆತ್ತಿ ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.
ಅದಾಗಲೇ ಗೀತಾ ನೀರಲ್ಲಿ ಮುಳುಗಿ ಅಸು ನೀಗಿದ್ದರೆನ್ನಲಾಗಿದೆ. ತೀವ್ರ ಆಘಾತಕ್ಕೊಳಗಾಗಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.