ಸಂಸದ ಇಂಜಿನಿಯರ್ ರಶೀದ್‌ಗೆ ಮಧ್ಯಂತರ ಜಾಮೀನು ಮಂಜೂರು

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಯೋತ್ಪಾದನೆ ಹಣಕಾಸಿನ ನೆರವು ಪ್ರಕರಣದಲ್ಲಿ ಬಂಧಿತರಾಗಿರುವ ಸಂಸದ ಇಂಜಿನಿಯರ್ ರಶೀದ್‌ಗೆ ದೆಹಲಿ ನ್ಯಾಯಾಲಯವು ಮಂಗಳವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಶೇಖ್ ಅಬ್ದುಲ್ ರಶೀದ್ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ವಿರುದ್ಧ ಗೆಲುವು ಸಾಧಿಸಿದ್ದರು.

ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ಕೋರಿ ರಶೀದ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಅವರು, ಅಕ್ಟೋಬರ್ 2ರವರೆಗೆ ಮಧ್ಯಂತರ ಜಾಮೀನು ನೀಡುತ್ತಿದ್ದೇನೆ. ಅಕ್ಟೋಬರ್ 3ರಂದು ಅವರು ಶರಣಾಗಬೇಕು ಎಂದು ಹೇಳಿದ್ದಾರೆ.

ನ್ಯಾಯಾಧೀಶರು ರಶೀದ್‌ಗೆ 2 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಶ್ಯೂರಿಟಿಯ ಮೇಲೆ ಮಧ್ಯಂತರ ಜಾಮೀನು ನೀಡಿದ್ದಾರೆ. ಅಲ್ಲದೆ ಸಾಕ್ಷಿಗಳ ಮೇಲೆ ಅಥವಾ ತನಿಖೆಯ ಮೇಲೆ ಪ್ರಭಾವ ಬೀರಬಾರದು ಸೇರಿದಂತೆ ವಿವಿಧ ಷರತ್ತುಗಳನ್ನು ನ್ಯಾಯಾಧೀಶರು ವಿಧಿಸಿದ್ದಾರೆ.

2017 ರ ಭಯೋತ್ಪಾದಕರಿಗೆ ಹಣಕಾಸಿನ ನೆರವು ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) 2019 ರಲ್ಲಿ ರಶೀದ್ ಅವರನ್ನು ಬಂಧಿಸಿತ್ತು. ಅಂದಿನಿಂದ ರಶೀದ್ ಜೈಲಿನಲ್ಲಿದ್ದಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!