ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಪ್ರಕರಣದ ಮೊದಲ ಬಾರಿಗೆ ನಟ ರಮೇಶ್ ಅರವಿಂದ್ ಮಾತನಾಡಿದ್ದಾರೆ.
ನಾನು ಸಾಮಾನ್ಯವಾಗಿ ಇಂಥಹಾ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ನನ್ನ ಪ್ರಕಾರ ಮೂವರು ದರ್ಶನ್ಗಳಿದ್ದಾರೆ. ಒಬ್ಬರು ನಿನ್ನೆಯ ದರ್ಶನ್, ಅವರು ನಮಗೆಲ್ಲ ಚೆನ್ನಾಗಿ ಪರಿಚಯ, ತಮ್ಮ ಸಿನಿಮಾಗಳಿಂದ ನಮ್ಮನ್ನು ಬಹುವಾಗಿ ರಂಜಿಸಿರುವ ದರ್ಶನ್, ವೀಕೆಂಡ್ ವಿತ್ ರಮೇಶ್ನಲ್ಲಿ ನಮ್ಮ ಮುಂದೆ ಸಾಧಕರ ಕುರ್ಚಿಯಲ್ಲಿ ಕೂತಿದ್ದ ದರ್ಶನ್. ಆ ದರ್ಶನ್ ನಮಗೆ ಬಹಳ ಆಪ್ತ’ ಎಂದಿದ್ದಾರೆ.
ನಿನ್ನೆಯ ದರ್ಶನ್ ಬಳಿಕ ಇಂದಿನ ದರ್ಶನ್ ಒಬ್ಬರಿದ್ದಾರೆ. ಆ ದರ್ಶನ್ ಅನ್ನು ನಾವು ಈಗ ನೋಡುತ್ತಿದ್ದೇವೆ. ಅವರು ಜೈಲಿನಲ್ಲಿದ್ದಾರೆ. ಏನೋ ತಪ್ಪು ಆಗಿಬಿಟ್ಟಿದೆ ಅದಕ್ಕಾಗಿ ಪರಿತಪ್ಪಿಸುತ್ತಿದ್ದಾರೆ. ಈ ಘಟನೆಯಿಂದ ನಮಗೆಲ್ಲರಿಗೂ ಬೇಜಾರಾಗಿದೆ. ದೊಡ್ಡ ತಪ್ಪು ಆಗಿದೆ. ಆ ತಪ್ಪನ್ನು ಯಾರು ಮಾಡಿದ್ದಾರೋ ಆ ವ್ಯಕ್ತಿಗೆ ಶಿಕ್ಷೆ ಆಗಲೇ ಬೇಕು. ಕಾನೂನು ಆ ಕಾರ್ಯವನ್ನು ಮಾಡಿಯೇ ಮಾಡುತ್ತೆ’ ಎಂದಿದ್ದಾರೆ ರಮೇಶ್.
‘ಆದರೆ ಈ ಎರಡೂ ದರ್ಶನ್ಗಿಂತಲೂ ಮುಖ್ಯವಾಗಿ ಇನ್ನೊಬ್ಬ ದರ್ಶನ್ ಇದ್ದಾರೆ ಅದು ನಾಳೆಯ ದರ್ಶನ್. ಈ ಸಮಸ್ಯೆಯಿಂದ ಹೊರಬಂದಾಗ ಅಥವಾ ಶಿಕ್ಷೆಯನ್ನು ಅನುಭವಿಸಿ ಹೊರ ಬಂದಾಗ ಅವರು ಏನು ಮಾಡುತ್ತಾರೆ, ಹೇಗೆ ಇರುತ್ತಾರೆ ಎಂಬುದು ಬಹಳ ಮುಖ್ಯ. ‘ಯೂ ಟರ್ನ್ ಇಲ್ಲ’ ಎಂಬ ಫಲಕ ಕಾಣಿಸಿಕೊಳ್ಳುವುದು ರಸ್ತೆಯಲ್ಲಿ ಮಾತ್ರ. ಆದರೆ ಜೀವನದಲ್ಲಿ ಹಾಗಲ್ಲ. ಜೀವನದಲ್ಲಿ ಒತಿಗಾಗಿ ಯಾವಾಗ ಬೇಕಾದರೂ ಯೂ ಟರ್ನ್ ತೆಗೆದುಕೊಳ್ಳಬಹುದು. ಈಗ ಆಗಿರುವ ತಪ್ಪಿಗೆ ಶಿಕ್ಷೆಆಗಬೇಕು ಎಂಬುದು ನಿಯಮ ಅದು ಆಗಿಯೇ ಆಗುತ್ತೆ. ಆದರೆ ಇದೆಲ್ಲ ಆದ ಬಳಿಕ ಮತ್ತೊಂದು ಅವಕಾಶ ಅವರಿಗೆ ಇದೆ. ಎಲ್ಲವನ್ನು ಸರಿ ಮಾಡಿಕೊಂಡು ನಿನ್ನೆಯ ದರ್ಶನ್ ಮತ್ತೆ ನಾಳೆಯ ದರ್ಶನ್ ಆಗಿ ಕಾಣಿಸಿಕೊಳ್ಳುವ ಅವಕಾಶ ಇದೆ’ ಎಂದಿದ್ದಾರೆ ರಮೇಶ್ ಅರವಿಂದ್.