ಮುರುಘಾಮಠದಲ್ಲಿ ರಾಹುಲ್ ಗಾಂಧಿಗೆ ಲಿಂಗ ದೀಕ್ಷೆ ನೀಡಿದ ಶ್ರೀ!

ಹೊಸದಿಗಂತ ವರದಿ,ಚಿತ್ರದುರ್ಗ:

ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಮುರುಘಾಮಠಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿ ಡಾ. ಶಿವಮೂರ್ತಿ ಮುರುಘಾ ಶರಣರಿಂದ ಆಶೀರ್ವಾದ ಪಡೆದರು. ಬಳಿಕ ೫೦ಕ್ಕೂ ಹೆಚ್ಚು ಸ್ವಾಮೀಜಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಬಸವಣ್ಣನವರು ತಮ್ಮ ಮನೆಯನ್ನು ಬಿಟ್ಟು ಹೊರಬಂದಿದ್ದು ಹೆಣ್ಣುಮಕ್ಕಳಿಗೆ ಸಮಾನತೆ ಸಿಗಲಿಲ್ಲವೆಂಬ ಕಾರಣಕ್ಕೆ. ಪ್ರಪಂಚದ ಮೊದಲ ಸಂಸತ್ ಅನುಭವ ಮಂಟಪವನ್ನು ತೆರೆದು ಸಮಾನತೆಯ ತತ್ವ ಸಿದ್ಧಾಂತವನ್ನು ತಂದರು. ಸರ್ವತೋಮುಖ ಅಭಿವೃದ್ಧಿಗೆ ಸಮಸಮಾಜದ ಕಲ್ಪನೆಯನ್ನು ತಂದರು. ಕಾಯಕ ದಾಸೋಹ ಸಿದ್ಧಾಂತಕ್ಕೆ ಹೆಚ್ಚಿನ ಮಹತ್ವ ನೀಡಿದರು ಎಂದರು.
ಕಾಯಕದಲ್ಲಿ ಪ್ರಾಮಾಣಿಕತೆ, ನಿಷ್ಠೆ ಇರಬೇಕು ಎಂದರು. ಶಾಂತಿ ಹಾಗು ಪಾರದರ್ಶಕ ಆಡಳಿತಕ್ಕೆ ಒತ್ತು ಕೊಟ್ಟರು. ಶ್ರದ್ಧೆ ಇಲ್ಲದಿದ್ದರೆ ಯಾವ ಕೆಲಸವೂ ಪರಿಪೂರ್ಣ ಆಗುವುದಿಲ್ಲ ಎಂದು ಹೇಳಿದರು.
ರಾಹುಲ್‌ಗಾಂಧಿ ಶ್ರೀಮಠವನ್ನು ಸೌಜನ್ಯಯುತವಾಗಿ ಸಂದರ್ಶಿಸಿದರು. ಇಷ್ಟಲಿಂಗದ ಬಗ್ಗೆ ವಿಚಾರಿಸಿದ ರಾಹುಲ್‌ಗಾಂಧಿಯವರು ಶ್ರೀಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಅವರ ಪ್ರಶ್ನೆಗಳಿಗೆ ಸ್ವಾಮೀಜಿ ಸಮಾಧಾನ ನೀಡಿದರು. ಇಷ್ಟಲಿಂಗ ಪೂಜೆ (ಶಿವಯೋಗದ) ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ನಂತರ ಮಾತನಾಡಿದ ರಾಹುಲ್‌ಗಾಂಧಿ, ನನಗೆ ಬಸವಣ್ಣನವರ ಬಗ್ಗೆ ಒಂದಿಷ್ಟು ಪರಿಚಯ ಇದೆ. ತಾವು ಯಾರನ್ನಾದರೂ ಕಳುಹಿಸಿದರೆ ಸಹಜ ಶಿವಯೋಗವನ್ನು ಕಲಿಯುತ್ತೇನೆ ಎಂದರು. ನಂತರ ಶ್ರೀಗಳು ರಾಹುಲ್ ಗಾಂಧಿಯವರಿಗೆ ಬಸವಣ್ಣನವರ ಭಾವಚಿತ್ರ ನೀಡಿ ಶಾಲು ಹೊದಿಸಿ ಗೌರವಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಇದೊಂದು ಐತಿಹಾಸಿಕ ಮಠ. ಶ್ರೀಗಳಿಗೆ ಹೇಗೆ ದೀಕ್ಷೆ ಕೊಟ್ಟರೋ ಹಾಗೆ ರಾಹುಲ್ ಗಾಂಧಿಯವರಿಗೆ ಇಷ್ಟಲಿಂಗ ದೀಕ್ಷೆ ನೀಡಿದ್ದಾರೆ. ರಾಹುಲ್ ಗಾಂಧಿಯವರು ಈ ಮಠಕ್ಕೆ ಬರಬೇಕೆಂದು ಬಹಳ ದಿನದಿಂದ ಹೇಳುತ್ತಿದ್ದರು. ಅನೇಕ ಸಮುದಾಯದವರಿಗೆ ದೀಕ್ಷೆ ಕೊಟ್ಟಿರುವುದು ಅವರಿಗೆ ಖುಷಿ ಕೊಟ್ಟಿದೆ. ಸೋನಿಯಾ ಗಾಂಧಿ, ರಾಜೀವ್ ಗಾಂಧಿ ಈ ಮಠದ ಬಗ್ಗೆ ಪ್ರಸ್ತಾಪಿಸುತ್ತಿದ್ದರು ಎಂದು ಸ್ಮರಿಸಿದರು.
ನಮ್ಮ ಪಕ್ಷದಿಂದ ಶ್ರೀಮಠ ಮೊದಲಾಗಿ ಯಾವುದೇ ಮಠಗಳಿಗೆ ಯಾವುದೇ ಸಂದರ್ಭದಲ್ಲಿ ನೋಯಿಸಿರುವುದಿಲ್ಲ. ಇದು ನಮ್ಮ ತತ್ವಸಿದ್ಧಾಂತ. ಮುಂದೆ ಭಾರತ ಜೋಡೋ ಕಾರ್ಯಕ್ರಮ ಬರುವಾಗ ಎಲ್ಲರೂ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುತ್ತೇವೆ. ಇದೊಂದು ಪವಿತ್ರವಾದ ಸಂದರ್ಭ. ಇದು ನಮ್ಮ ಭಾಗ್ಯ ಎಂದರು.
ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ನಾವೆಲ್ಲ ಸೇರಿ ಪರಿಶಿಷ್ಟ ಜಾತಿ ಮತ್ತು ಪಂಗಡದ ೨ ಕೋಟಿ ಜನರಿಗೆ ಮೀಸಲಾತಿ ಸಿಗಬೇಕು. ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ನಮ್ಮ ಸಮುದಾಯಕ್ಕೆ ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ಕೊಟ್ಟು ಸಾಮಾಜಿಕ ಸ್ಥಾನ ಒದಗಿಸಿದ್ದರು ಎಂದು ಸ್ಮರಿಸಿದರು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು ಮಾತನಾಡಿದರು. ಬವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಹಾವೇರಿ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು, ಸವಣೂರು ದೊಡ್ಡಹುಣಸೇಮಠದ ಶ್ರೀ ಚೆನ್ನಬಸವ ಸ್ವಾಮಿಗಳು, ಹೆಬ್ಬಾಳು ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಜಿಗಳು, ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮಿಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರುಗಳು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!