ʼಮೃಣಾಲ ಇನ್ನೂ ಚಿಕ್ಕವ, ನಾಲಿಗೆ ಮೇಲೆ ಹಿಡಿತ ಇರಲಿʼ ಸಂಸದೆ ಮಂಗಲಾ ಅಂಗಡಿ ಫುಲ್ ಗರಂ

ಹೊಸದಿಗಂತ ವರದಿ ಬೆಳಗಾವಿ:

ಬೆಳಗಾವಿ ಲೋಕಸಭಾ ಮತಕ್ಷೇತ್ರದ ಸಂಸದೆ ಶ್ರೀಮತಿ ಮಂಗಲಾ ಅಂಗಡಿ ಸೌಮ್ಯ ಸ್ವಭಾವದವರು. ಮಾತು ಕಡಿಮೆ. ಆದರೆ, ಇವತ್ತು ಫುಲ್ ಗರಂ ಆಗಿದ್ದರು.

ಹೌದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಅವರ ಪುತ್ರ ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಮಾಡುತ್ತಿರುವ ಆರೋಪಗಳಿಂದ ಆಕ್ರೋಶಗೊಂಡಿದ್ದರು.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃಣಾಲ್‌ ಹೆಬ್ಬಾಳ್ಕರ್ ನೀನಿನ್ನು ಬಹಳ ಚಿಕ್ಕವ. ನಿನ್ನ ತಾಯಿ ಮಾತನಾಡಲಿ. ನಿನ್ನ ಮಾತಿನ ಮೇಲೆ ಹಿಡಿತ ಇರಲಿ‌. ಹಿರಿಯ ಮುಖಂಡರ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದು ತಾಕೀತು ಮಾಡಿದರು.

ಕಳೆದ 20 ವರ್ಷದಿಂದ ಬೆಳಗಾವಿ ಅಭಿವೃದ್ಧಿಯಾಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವುದು ಎಷ್ಟು ಸರಿ ಎಂದು‌ ವಾಗ್ದಾಳಿ ನಡೆಸಿದರು. ಕಳೆದ 20 ವರ್ಷದಿಂದ ಬಿಜೆಪಿ ಸಂಸದರು ಏನೂ ಮಾಡಿಲ್ಲ ಎಂದು ಅಪಪ್ರಚಾರ ಮಾಡುತ್ತೀರಿ. ಆದರೆ 20 ವರ್ಷದಲ್ಲಿ ನಾವು 16 ಸಾವಿರ ಕೋಟಿ ರೂ.ಗಳ ಅನುದಾನ ತಂದು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ. ಸೋಲಿನ ಹತಾಶೆಯಿಂದ ಮೃಣಾಲ್ ಬೇಕಾದನ್ನು ಮಾತನಾಡುವುದಲ್ಲ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.

ಸುಮಾರು 927 ಕೋಟಿ ರೂ. ಅನುದಾನದಲ್ಲಿ ಬೆಳಗಾವಿ, ಕಿತ್ತೂರು ಹಾಗೂ ಧಾರವಾಡ ರೈಲು ನಿರ್ಮಾಣಕ್ಕೆ ಕೇಂದ್ರ ಸರಕಾರದ ರೈಲ್ವೆ ಸಚಿವಾಲಯದಿಂದ ಅನುಮತಿ ಪಡೆದಿದ್ದು ಸುರೇಶ ಅಂಗಡಿ, 100 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯಲ್ಲಿ ನಾಲ್ಕು ರೈಲ್ವೆ ಮೆಲ್ಸೇತುವೆ ನಿರ್ಮಾಣ, 210 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ನಿಲ್ದಾಣವನ್ನು ನವೀಕರಣ, 3,600 ಕೋಟಿ ರೂ. ವೆಚ್ಚದಲ್ಲಿ ರೈಲು ಮಾರ್ಗದ ಡಬ್ಬಿಂಗ್ ಮತ್ತು ವಿದ್ಯುದ್ಧೀಕರಣ ಕಾರ್ಯ ಮಿರಜ್ ಲೊಂಡಾ ಮಾರ್ಗದಲ್ಲಿ ಪ್ರಗತಿಯಲ್ಲಿದೆ. ನನ್ನ ಅವಧಿಯಲ್ಲಿಯೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ವಿನಾಕಾರಣ ಇಂಥ ನೀಚ ರಾಜಕಾರಣ ಮಾಡುವುದನ್ನು ಬಿಡಬೇಕೆಂದು ಮೃಣಾಲ್‌ ಗೆ ಎಚ್ಚರಿಕೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!