ಹೊಸದಿಗಂತ ವರದಿ ರಾಮನಗರ:
ಇಲ್ಲಿನ ಐಜೂರು ಮಹಿಳಾ ಪೊಲೀಸ್ ಠಾಣೆ ಸಮೀಪದ ಬಿ.ಎಂ. ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಕೌಟುಂಬಿಕ ಕಲಹದ ಕಾರಣಕ್ಕೆ ತನ್ನ ಪತ್ನಿ ಮತ್ತು ಪುತ್ರನ ಎದುರಿಗೇ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿನ್ನ-ಬೆಳ್ಳಿ ತಯಾರಿಸುವ ಕೆಲಸ ಮಾಡುವ ವಿನಾಯಕನಗರ ಬಡಾವಣೆಯ ನಟರಾಜ್ ಆಚಾರ್ (50) ಮೃತ ವ್ಯಕ್ತಿ. ದೀಪಾ ಎಂಬುವರನ್ನು ಮದುವೆಯಾಗಿರುವ ನಟರಾಜ್ ಅವರಿಗೆ ಎಸ್‌ಎಸ್‌ಎಲ್‌ಸಿ ಓದುತ್ತಿರುವ ಪುತ್ರನಿದ್ದಾನೆ.
ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಪತಿ ವಿರುದ್ಧ ದೀಪಾ ಮಹಿಳಾ ಠಾಣೆಗೆ ಮತ್ತು ಹಾಸನ ಜಿಲ್ಲೆಯ ಹೊಳೆನರಸೀಪುರದ ಠಾಣೆಗೆ ದೂರು ಕೊಟ್ಟಿದ್ದರು. ಆದರೂ, ದಂಪತಿ ನಡುವಿನ ಕಲಹ ನಿಂತಿರಲಿಲ್ಲ ಎಂದು ಪೊಲೀಸರು ತಿಳಿಸಿದರು.
ದೀಪಾ ಅವರು ಎರಡು ತಿಂಗಳಿಂದ ಪತಿಯಿಂದ ಪ್ರತ್ಯೇಕವಾಗಿ ಹೊಳೆನರಸೀಪುರದಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ನೆಲೆಸಿದ್ದರು. ಶನಿವಾರ ಪುತ್ರನನ್ನು ಭೇಟಿ ಮಾಡುವುದಕ್ಕಾಗಿ ರಾಮನಗರಕ್ಕೆ ಬಂದಿದ್ದರು. ವಿಷಯ ತಿಳಿದು ಶಾಲೆಗೆ ಬಂದಿದ್ದ ನಟರಾಜ್ ಮತ್ತು ದೀಪಾ ನಡುವೆ ಮತ್ತೆ ಜಗಳ ನಡೆದಿದೆ.
ಪತಿ ನಡೆಗೆ ಬೇಸತ್ತ ದೀಪಾ, ಮತ್ತೆ ದೂರು ಕೊಡುವುದಾಗಿ ಮಹಿಳಾ ಠಾಣೆಗೆ ಪುತ್ರನೊಂದಿಗೆ ಸಂಜೆ 4.45ರ ಸುಮಾರಿಗೆ ಬಂದಿದ್ದಾರೆ. ಇಬ್ಬರನ್ನೂ ಹಿಂಬಾಲಿಸಿಕೊಂಡು ಬಂದಿರುವ ನಟರಾಜ್, ದೂರು ಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ. ಆಗ ಮತ್ತೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ನಟರಾಜ್ ಸೈನೈಡ್ ಸೇವಿಸಿದ್ದಾರೆ. ಕೂಡಲೇ ನೆಲಕ್ಕೆ ಕುಸಿದ ಅವರು ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ:
ಚಿನ್ನ-ಬೆಳ್ಳಿ ತಯಾರಿಸುವ ಕೆಲಸ ಮಾಡುತ್ತಿದ್ದ ನಟರಾಜ್ ಅವರು, ಇತ್ತೀಚೆಗೆ ನಗರದ ಎಂ.ಜಿ. ರಸ್ತೆಯ ಬಳಿ ಸಣ್ಣದೊಂದು ಚಿನ್ನಾಭರಣದ ಅಂಗಡಿ ಶುರು ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.



