August 30, 2026
Sunday, August 30, 2026
spot_img

ಮುದರಂಗಡಿ ಡೇವಿಡ್ ಡಿಸೋಜಾ ಹ*ತ್ಯೆ ಪ್ರಕರಣ: ಬಂಧಿತ ಶಾರ್ಪ್ ಶೂಟರ್‌ಗಳ ಹಿಂದಿದೆ ‘ಸುಪಾರಿ’ ನೆರಳು!

ಹೊಸದಿಗಂತ ವರದಿ ಮಂಗಳೂರು:

ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಉಡುಪಿ ಜಿಲ್ಲೆಯ ಮುದರಂಗಡಿಯ ಉದ್ಯಮಿ, ಪಂಚಾಯತ್ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜಾ ಬರ್ಬರ ಕೊಲೆಗೆ ಹಣಕಾಸಿಗೆ ಸಂಬಂಧಿಸಿ ಉಂಟಾಗಿದ್ದ ವೈಮನಸ್ಸು ಕಾರಣ ಎಂಬ ಶಂಕೆ ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತವಾಗಿದೆ.

ಈಗಾಗಲೇ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಘಟನೆ ನಡೆದ ೨೪ ತಾಸುಗಳ ಒಳಗಾಗಿ ಉತ್ತರ ಪ್ರದೇಶ ಥಾಣಾ ಪಿಲ್ವದ ನಿವಾಸಿ ರಾಜು (42), ಉತ್ತರಾಖಂಡದ ಆಕಾಶ್ ಅಲಿಯಾಸ್ ಅನ್ಮೋಲ್ ರಸ್ತಗಿ (23) ಹಾಗೂ ಬಿಹಾರದ ಜಿಯಾವುಲ್ಲ ಅಲಿಯಾಸ್ ದೀಪಕ್ (38) ಎಂಬವರನ್ನು ಬಂಧಿಸಿದ್ದು, ಇನ್ನಷ್ಟು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯ ವೇಳೆ ಮಹತ್ವದ ಅಂಶಗಳು ಬೆಳಕಿಗೆ ಬರುವ ಸಾಧ್ಯತೆ ದಟ್ಟವಾಗಿದೆ.

ಸಿನಿಮೀಯ ಮಾದರಿಯಲ್ಲಿ ಬಂಧನ!

ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಸಿನಿಮೀಯ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳ ಪೈಕಿ ರಾಜುವನ್ನು ಬೈಂದೂರಿನ ಒತ್ತಿನೆಣೆಯಲ್ಲಿ ಕಾಲಿಗೆ ಗುಂಡಿಟ್ಟು ಬಂಧಿಸಲಾಗಿದ್ದರೆ, ಅಜಯ್ ರಸ್ತೋಗಿ ಯಾನೆ ಅನ್ಮೋಲ್‌ನನ್ನು ಕುಮಟಾದಲ್ಲಿ ಹಾಗೂ ಜಿಯಾಹುಲ್ ವಜೂಲ್ ಶೇಖ್ ಯಾನೆ ದೀಪಕ್‌ನನ್ನು ಭಟ್ಕಳದಲ್ಲಿ ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಮೇಲೆಯೇ ಗುಂಡಿನ ದಾಳಿ!

ಬಸ್ ಮೂಲಕ ಭಟ್ಕಳಕ್ಕೆ ಎಸ್ಕೇಪ್ ಆಗುವ ಪ್ರಯತ್ನದಲ್ಲಿದ್ದ ಆರೋಪಿ ರಾಜುಗೆ ಪೊಲೀಸರು ಬೈಂದೂರಿನ ಒತ್ತಿನಾಣೆ ಬಳಿ ಬಲೆ ಬೀಸಿದ್ದರು. ಆದರೆ ಈ ಚಾಲಾಕಿ ಪೊಲೀಸರನ್ನು ಕಂಡು ಬಸ್ ಬಿಟ್ಟು ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಬೆನ್ನಟ್ಟಿದಾಗ ಕಾಪು ಪಿಎಸ್‌ಐ ತೇಜಸ್ವಿ ಅವರ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದ. ಈ ಸಂದರ್ಭ ಪೊಲೀಸರು ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡಿಕ್ಕಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳು ಪಿಎಸ್‌ಐ ತೇಜಸ್ವಿ, ಗುಂಡೇಟು ತಗುಲಿರುವ ಆರೋಪಿ ರಾಜು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:

ಇವರು ವೃತ್ತಿಪರ ಶಾರ್ಪ್ ಶೂಟರ್!

ಪೊಲೀಸರ ಮಾಹಿತಿ ಪ್ರಕಾರ ಬಂಧಿತರು ವೃತ್ತಿಪರ ಶಾರ್ಪ್ ಶೂಟರ್‌ಗಳಾಗಿದ್ದು, ಡೇವಿಡ್ ಡಿಸೋಜಾ ನಡೆಸುತ್ತಿದ್ದ ಕಾಮಗಾರಿಯೊಂದಕ್ಕೆ ಸಂಬಂಧಿಸಿ ಅನ್ಯ ರಾಜ್ಯದ ಕಂಪೆನಿಯೊಂದರ ಜೊತೆ ಹಣಕಾಸಿನ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸುಪಾರಿ ಪಡೆದು ಕೊಲೆ ನಡೆಸಲಾಗಿದೆ. ಕೃತ್ಯಕ್ಕೆ ಆಶ್ರಯ ಹಾಗೂ ಹಣಕಾಸು ವ್ಯವಸ್ಥೆ ನಡೆಸಿದ ಸೂತ್ರಧಾರರ ಪತ್ತೆಗಾಗಿ ತನಿಖೆ ವಿವಿಧ ಆಯಾಮಗಳಲ್ಲಿ ತೀವ್ರಗೊಂಡಿದೆ.

ಆ.7ರಂದು ಮುದರಂಗಡಿ ಸೆಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್ ಬಳಿ ಹಾಡಹಗಲೇ ಹಂತಕರು ಪಾಯಿಂಟ್ ಬ್ಲ್ಯಾಂಕ್ ರೇಂಜ್‌ನಲ್ಲಿ ಮೂರು ಸುತ್ತು ಗುಂಡು ಹಾರಿಸಿ ಡೇವಿಡ್ ಅವರನ್ನು ಕೊಲೆಗೈದಿದ್ದರು.

ಆರೋಪಿಗಳ ಬಂಧನ ಕಾರ್ಯಾಚರಣೆ, ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ ನಡೆದಿದ್ದು, ಕಾಪು ವೃತ್ತ ನಿರೀಕ್ಷಕ ಅಝ್‌ಮತ್ ಆಲಿ ಜಿ., ಡಿಎಸ್‌ಬಿ. ವಿಭಾಗದ ಪಿ.ಐ. ಹರೀಶ್, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್, ಕುಂದಾಪುರ ವೃತ್ತ ನಿರೀಕ್ಷ ಸಂತೋಷ್ ಕಾಯ್ಕಿಣಿ, ಬೈಂದೂರು ಪಿಎಸ್‌ಐ ಮಹೇಶ್, ಕಾಪು ಪಿಎಸ್‌ಐ. ತೇಜಸ್ವಿ, ಶಿರ್ವ ಪಿ.ಎಸ್. ಮಂಜುನಾಥ ಮರಬದ, ಕೊಲ್ಲೂರು ಪಿಎಸ್ ಐ ವಿನಯ್, ಕಾರ್ಕಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಎಂ.ಎಸ್. ಪಡುಬಿದ್ರಿ ಪಿಎಸ್‌ಐ ಶಕ್ತಿವೇಲು ಹಾಗೂ ಅನಿಲ್, ಶಿರ್ವ ಪಿಎಸ್‌ಐ ಲೋಹಿತ್ ಕುಮಾರ್, ಪ್ರೊಬೆಷನರಿ ಪಿಎಸ್‌ಐ ಶಿಫಾಝ್, ಹಾಗೂ ಸಿಬ್ಬಂದಿಯವರ ತಂಡ, ಭಟ್ಕಳ ಹಾಗೂ ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾಧಿಕಾರಿಯವರು, ಬೆರಳಚ್ಚು, ಶ್ವಾನದಳ ಹಾಗೂ ಸಿಡಿಆರ್‌ಸೆಲ್ ಉಡುಪಿ ಸಾಥ್ ನೀಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !