Friday, March 31, 2023

Latest Posts

ಹೊಸ ಇತಿಹಾಸ ಬರೆಯಿತು ಮುಡಿಪು ಭಾರತೀ ಶಾಲೆಯ ಮಹಿಳಾ ದಿನಾಚರಣೆ: ನಿವೃತ್ತ ಶಿಕ್ಷಕಿಯರಿಗೆ ಫಲ ತಾಂಬೂಲ, ಆರತಿ ಬೆಳಗಿ ಗೌರವಾರ್ಪಣೆ

ಹೊಸದಿಗಂತ ವರದಿ ಮುಡಿಪು:

ತಾಯಿಯ ಬಳಿಕ ಮಗುವಿನ ಬೆಳವಣಿಗೆಯಲ್ಲಿ ಶಿಕ್ಷಕಿಯರ ಪಾತ್ರ ದೊಡ್ಡದು. ಮಕ್ಕಳ ವ್ಯಕ್ತಿತ್ವ ರೂಪಿಸುವ ಕಾರ್ಯವನ್ನು ಶಿಕ್ಷಕಿಯರು ಮಾಡುತ್ತಾರೆ. ಮಹಿಳಾ ದಿನ ಎಂದರೆ ಮಹಿಳೆಯರನ್ನು ಗುರುತಿಸುವ ಸಂದರ್ಭ ಎಂದು ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲೆ ವತ್ಸಲಾ ಪಿ. ಹೇಳಿದ್ದಾರೆ.

ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಮುಡಿಪು ಶ್ರೀ ಭಾರತಿ ಶಾಲೆಯ ಅಮೃತ ಮಹೋತ್ಸವ ಮಹಿಳಾ ಸಮಿತಿ ವತಿಯಿಂದ ಮಾ.12ರಂದು ಆದಿತ್ಯವಾರ ಶಾಲೆಯಲ್ಲಿ ನಡೆದ “ಮಹಿಳೆ ನಿನ್ನಿಂದಲೇ ಈ ಇಳೆ” ಶೀರ್ಷಿಕೆಯಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಖ್ಯ ಅತಿಥಿ, ವಾಮಂಜೂರು ಎಸ್ ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿ ವಾರಣಾಸಿ ಗಣೇಶ್ ಭಟ್ ಮಾತನಾಡಿ, ಮಕ್ಕಳ ಪಾಲನೆಯೇ ಅಮ್ಮಂದಿರಿಗೆ ಹೆಮ್ಮೆ. ಮಕ್ಕಳ ಸಾಧನೆಯ ಶ್ರೇಯಸ್ಸು ಅಮ್ಮಂದಿರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.

ಮಂಗಳಗಂಗೋತ್ರಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಖಲತಾ ದೇವದಾಸ್ ಭಂಡಾರಿ, ಕೋಶಾಧಿಕಾರಿ ಮೈನಾ ಶ್ರೀನಾಥ್ ಕೊಂಡೆ, ಅಂಗನವಾಡಿ ನಿವೃತ್ತ ಶಿಕ್ಷಕಿ ಶಂಕರಿ ಎಸ್.ಎನ್.ಭಟ್ ಅತಿಥಿಗಳಾಗಿದ್ದರು. ಮಹಿಳಾ ಸಮಿತಿ ಅಧ್ಯಕ್ಷೆ ವಿಜಯಕುಮಾರಿ ಅಧ್ಯಕ್ಷತೆ ವಹಿಸಿದ್ದರು.

ರೇಖಾ ಸಿ.ಎಚ್.ಪ್ರಾರ್ಥಿಸಿದರು. ಶಿಕ್ಷಕಿ ವಿಜಯಲಕ್ಷ್ಮೀ ಸ್ವಾಗತಿಸಿದರು. ಹಳೆ ವಿದ್ಯಾರ್ಥಿನಿಯರಾದ ಶಬೀನಾ ಹಾಗೂ ಜಯಶ್ರೀ ಪಿ.ಲಾಡ ಸನ್ಮಾನಿತರನ್ನು ಪರಿಚಯಿಸಿದರು. ಡಾ.ಸುರೇಖಾ ಅಮರನಾಥ್ ಶೆಟ್ಟಿ ವಂದಿಸಿದರು. ಸುರೇಖಾ ಯಳವಾರ ನಿರೂಪಿಸಿದರು.

ವಿಶಿಷ್ಟ ದಿನಾಚರಣೆ: ಭಾರತೀ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆ ವಿಶಿಷ್ಟವಾಗಿ ನಡೆಯಿತು. 1992-93ನೇ ಬ್ಯಾಚಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ ವಿಶಿಷ್ಟ ಪಲ್ಲಕ್ಕಿಯಲ್ಲಿ ಶಾಲೆಯ ನಿವೃತ್ತ ಶಿಕ್ಷಕಿಯರ ಫೋಟೋ ಫ್ರೇಮ್ ನ್ನು ಮೆರವಣಿಗೆಯಲ್ಲಿ ವೇದಿಕೆಗೆ ತಂದು ಅನಾವರಣ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.ನಿವೃತ್ತ ಹಿರಿಯ ಶಿಕ್ಷಕಿಯರಾದ ಎಂ.ಕೆ.ಲೀಲಾ, ವಿ.ಸುಧಾ, ಕಮಲಾಕ್ಷಿ, ಶಶಿಕಲಾ ಜಿ. ಅವರನ್ನು ಫಲತಾಂಬೂಲ ನೀಡಿ, ಆರತಿ ಬೆಳಗಿ, ಸೀರೆ ಇತ್ತು ಸನ್ಮಾನಿಸಲಾಯಿತು.

ಕವಯತ್ರಿ, ಹಳೆ ವಿದ್ಯಾರ್ಥಿನಿ ಪಂಕಜಾ ಕೆ.ರಾಮ ಭಟ್, ಶ್ರಮಿಕ ಮಹಿಳೆ ಕಮಲಾ ಭಟ್, ವಿಶೇಷ ಮಕ್ಕಳ ತಾಯಂದಿರಾದ ಜಾನಕಿ ವಾಸು, ಅಮಿತಾ ಸಂತೋಷ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಮುಡಿಪು ವಲಯದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ ಕೊಡೆಗಳನ್ನು ನೀಡಿ ಗೌರವಿಸಲಾಯಿತು.

ಹಳೆ ವಿದ್ಯಾರ್ಥಿನಿ ರೇಖಾ ಸಿ.ಎಚ್.ನೇತೃತ್ವದಲ್ಲಿ ಮಹಿಳೆಯರಿಗಾಗಿ ಮನರಂಜನೆಯ ವಿವಿಧ ಆಟಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅನ್ನಪೂರ್ಣ ಕಿಲಾರಿ, ಸುಜಯಾ, ಜಯಶ್ರೀ, ವಿಜಯಲಕ್ಷ್ಮೀ ಟೀಚರ್, ಶಶಿಪ್ರಭಾ, ಕವಿತಾ ಮತ್ತಿತರರು ಸಹಕರಿಸಿದರು.

ಅಪರಾಹ್ನ ಭೋಜನ ವಿರಾಮದಲ್ಲಿ ಮಂಜುಳಾ ಜಿ.ರಾವ್ ನಿರ್ದೇಶನದ ಇರಾದ ಕೊಳಲು ಸಂಗೀತ ವಿದ್ಯಾಲಯ ವಿದ್ಯಾರ್ಥಿಗಳಿಂದ ಸಂಗೀತ ಸೌರಭ ಹಾಗೂ ವಿದುಷಿ ಉಮಾ ಹೆಬ್ಬಾರ್ ಶಿಷ್ಯೆಯರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

ಅಪರಾಹ್ನ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಹಿಳಾ ಸಮಿತಿ ಅಧ್ಯಕ್ಷೆ ವಿಜಯಕುಮಾರಿ ವಹಿಸಿದ್ದರು. ಅತಿಥಿಗಳಾಗಿ ಜಿ.ಪಂ. ಮಾಜಿ ಅಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಬಾಳೆಪುಣಿ ಗ್ರಾ.ಪಂ. ಅಧ್ಯಕ್ಷೆ ರಜಿಯಾ, ಕುರ್ನಾಡು ಗ್ರಾ.ಪಂ.ಉಪಾಧ್ಯಕ್ಷೆ ಪ್ರೇಮಾ ಗಟ್ಚಿ, ನಿವೃತ್ತ ಶಿಕ್ಷಕಿ ಶಾರದಾ ಬಿ., ಹಳೆ ವಿದ್ಯಾರ್ಥಿನಿ, ರೇಡಿಯೋ ಮಣಿಪಾಲದ ಸಹಾಯಕ ಪ್ರಾಧ್ಯಾಪಕಿ ಹಾಗೂ ಸಂಯೋಜಕಿ ಡಾ.ರಶ್ಮಿ ಅಮ್ಮೆಂಬಳ, ಹಿರಿಯ ಶಿಕ್ಷಕಿ ಶೈಲಜಾ ಪಾಲ್ಗೊಂಡರು. ಮಹಿಳಾ ದಿನಾಚರಣೆಗೆ ಶ್ರಮಿಸಿದವರನ್ನು ಪುರಸ್ಕರಿಸಲಾಯಿತು.

ಶಾಲೆಯ ಸಂಚಾಲಕ ಸುಬ್ರಹ್ಮಣ್ಯ ಭಟ್, ಅಮೃತಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್.,ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಮಹಮ್ಮದ್ ಅಸ್ಗರ್, ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್, ಶಕುಂತಳಾ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಶೆಟ್ಟಿ ಮತ್ತಿತರರು ಪಾಲ್ಗೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!