August 3, 2026
Monday, August 3, 2026
spot_img

ಬಹು ನಿರೀಕ್ಷಿತ ಜಿಯೋ ಐಪಿಒ ಘೋಷಿಸಿದ ಮುಖೇಶ್‌ ಅಂಬಾನಿ: 27 ಕೋಟಿ ಷೇರುಗಳ ಬಿಡುಗಡೆಗೆ ಸಿದ್ಧತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಸ್ಟಾಕ್‌ ಮಾರ್ಕೆಟ್‌ ಇತಿಹಾಸದಲ್ಲೇ ಅತ್ಯಂತ ನಿರೀಕ್ಷಿತ ಸಾರ್ವಜನಿಕ ಷೇರು ಬಿಡುಗಡೆಗಳಲ್ಲಿ ಒಂದಾಗಿರುವ ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒಗೆ ಅಧಿಕೃತ ಚಾಲನೆ ದೊರೆತಿದೆ. ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಆಡಳಿತ ಮಂಡಳಿಯು 27 ಕೋಟಿ ಈಕ್ವಿಟಿ ಷೇರುಗಳ ಫ್ರೆಶ್ ಇಶ್ಯೂಗೆ ಅನುಮೋದನೆ ನೀಡಿದ್ದು, ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಷೇರುಪೇಟೆಗಳಿಗೆ ಮಾಹಿತಿ ನೀಡಿದೆ.

ಪ್ರತಿ ಷೇರಿನ ಮುಖಬೆಲೆ 10 ರೂಪಾಯಿ ಆಗಿರಲಿದ್ದು, ಅಂತಿಮ ಇಶ್ಯೂ ದರವನ್ನು ಬುಕ್ ಬಿಲ್ಡಿಂಗ್ ಪ್ರಕ್ರಿಯೆ ಮೂಲಕ ನಿರ್ಧರಿಸಲಾಗುತ್ತದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ 49ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ಜಿಯೋ ಪ್ಲಾಟ್‌ಫಾರ್ಮ್ಸ್ ಮಂಡಳಿ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್‌ಗೆ ಅನುಮೋದನೆ ನೀಡಿದ್ದು, ಅದನ್ನು ಸೆಬಿ, ಬಿಎಸ್‌ಇ ಮತ್ತು ಎನ್‌ಎಸ್‌ಇಗೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:

ಈ ಐಪಿಒವನ್ನು ರಿಲಯನ್ಸ್ ಕುಟುಂಬ ಹಾಗೂ ಲಕ್ಷಾಂತರ ಷೇರುದಾರರಿಗೆ ಭಾವನಾತ್ಮಕ ಕ್ಷಣ ಎಂದು ಬಣ್ಣಿಸಿದ ಅವರು, ಜಿಯೋ ಭಾರತವು ಜಾಗತಿಕ ಮಟ್ಟದ ತಂತ್ರಜ್ಞಾನ ಕಂಪನಿಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ವಿಶ್ವಕ್ಕೆ ತೋರಿಸಲಿದೆ ಎಂದರು.

ಪ್ರಸ್ತುತ ಜಿಯೋ 52.4 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿದ್ದು, 26.8 ಕೋಟಿಗೂ ಹೆಚ್ಚು 5ಜಿ ಬಳಕೆದಾರರನ್ನು ಹೊಂದಿದೆ. ಜಿಯೋ ಏರ್‌ಫೈಬರ್ ಸೇವೆ ಈಗಾಗಲೇ 1.3 ಕೋಟಿ ಮನೆಗಳಿಗೆ ತಲುಪಿದ್ದು, ಜಿಯೋ ವಿಶ್ವದ ಅತಿ ದೊಡ್ಡ ಫಿಕ್ಸ್ಡ್ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಆಪರೇಟರ್ ಆಗಿ ಹೊರಹೊಮ್ಮಿದೆ.

ಮುಂದಿನ ದಿನಗಳಲ್ಲಿ ಜಿಯೋ ಟ್ರೂ 5ಜಿ ವಿಸ್ತರಣೆ, ಏರ್‌ಫೈಬರ್ ಮೂಲಕ ಬ್ರಾಡ್‌ಬ್ಯಾಂಡ್ ಸೇವೆ, ಸಣ್ಣ ಉದ್ಯಮಗಳ ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆಯ ವಿಸ್ತರಣೆ ಹಾಗೂ ಭಾರತೀಯ ತಂತ್ರಜ್ಞಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಕಂಪನಿ ಹೊಂದಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !