ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಅತಿದೊಡ್ಡ ಉದ್ಯಮಿ, ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರನ್ನು ಕೊಲ್ಲುವುದಾಗಿ ಮೂರನೇ ಬೆದರಿಕೆ ಬಂದಿದೆ. ಇಮೇಲ್‌ನಲ್ಲಿ ಬಂದಿರುವ ಬೆದರಿಕೆ ಸಂದೇಶದಲ್ಲಿ ಈ ಬಾರಿ 400ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಸೋಮವಾರ ಇ -ಮೇಲ್ ಬಂದಿದ್ದು, ನಾಲ್ಕು ದಿನಗಳಲ್ಲಿ 3ನೇ ಬಾರಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಶುಕ್ರವಾರ ಅಪರಿಚಿತ ವ್ಯಕ್ತಿಯಿಂದ 20 ಕೋಟಿ ರೂ. ನೀಡಿ, ಇಲ್ಲದಿದ್ದರೆ ಗುಂಡಿಕ್ಕಿ ಕೊಲ್ಲುವುದಾಗಿ ಮೊದಲ ಇಮೇಲ್ ಬಂದಿತ್ತು. ನಂತರ ಅಂಬಾನಿ ಅವರ ಭದ್ರತಾ ಉಸ್ತುವಾರಿ ನೀಡಿದ ದೂರಿನ ಆಧಾರದ ಮೇಲೆ ಇಲ್ಲಿನ ಗಾಮ್‌ದೇವಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಶನಿವಾರ ಕಂಪನಿಗೆ 200 ಕೋಟಿ ರೂಪಾಯಿ ಬೇಡಿಕೆಯ ಇಮೇಲ್ ಬಂದಿದೆ. ನಂತರ ಕಂಪನಿಗೆ ಸೋಮವಾರ ಮೂರನೇ ಇಮೇಲ್ ಬಂದಿದ್ದು, ಅದನ್ನು ಕಳುಹಿಸಿದವರು 400 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಂಬೈನ ಅಪರಾಧ ವಿಭಾಗ ಮತ್ತು ಸೈಬರ್ ತಂಡಗಳು ಇ-ಮೇಲ್ ಕಳುಹಿಸುವವರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.