ಹೊಸದಿಗಂತ ವರದಿ, ತಿಪಟೂರು
ನಾಡಿನ ಶಕ್ತಿದೇವತೆಗಳಲ್ಲಿ ಒಂದಾದ ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠದ ಚೌಡೇಶ್ವರಿ ದೇವಿಯ ಮುಳ್ಳುಗದ್ದಿಗೆ ಉತ್ಸವ ಆಳೆತ್ತರದ ಗಟ್ಟಿಕಾರೆಮುಳ್ಳಿನ ರಾಶಿಯ ಮೇಲೆ ವಿಜಯದಶಮಿಯ ಶನಿವಾರ ಅತ್ಯಂತ ವೈಭವ ಮತ್ತು ಭಕ್ತಿ ಪರಾಕಾಷ್ಠೆಯಿಂದ ನಡೆಯಿತು.
ಮುಳ್ಳುಗದ್ದಿಗೆ ಉತ್ಸವಕ್ಕೆ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.
ಮುಳ್ಳು ಗದ್ದುಗೆ ವಿಶೇಷ
ಸುಮಾರು 7-8 ಅಡಿಯಷ್ಟು ಉದ್ದ-ಅಗಲದ ಜಾಗದಲ್ಲಿ ಅಳೆತ್ತರದಷ್ಟು ಗಟ್ಟಿ ಕಾರೆಮುಳ್ಳಿನ ಗಿಡಗಳನ್ನು ರಾಶಿ ಹಾಕಲಾಗುತ್ತದೆ. ಈ ಮುಳ್ಳಿನ ರಾಶಿಯ ಮೇಲೆ ಚೌಡೇಶ್ವರಿ ದೇವಿಯವರ ಉತ್ಸವ ಮೂರ್ತಿಯನ್ನು ಆರೇಳು ಭಕ್ತರು ಹೊತ್ತುಕೊಂಡ ಅತ್ಯಂತ ಭಕ್ತಿಶ್ರದ್ಧೆಯಿಂದ ಸರಾಗವಾಗಿ ಮುಳ್ಳಿನ ರಾಶಿಯನ್ನು ತುಳಿಯುತ್ತಾ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಮೂರು ಬಾರಿ ಹತ್ತಿ ನಡೆಯುತ್ತಾರೆ. ಇದರ ಜೊತೆಗೆ ಹರಕೆ ಮಾಡಿಕೊಂಡ ಭಕ್ತ ಸಮೂಹವೂ ದೇವಿಯ ಹಿಂದೆ ನಡೆದುಕೊಂಡು ಹೋಗುವ ಮೂಲಕ ತಮ್ಮ ಹರಕೆ ತೀರಿಸಿ ಧನ್ಯತಾಬಾವ ಮೆರೆಯುತ್ತಾರೆ. ಈ ಬಾರಿಯ ಮುಳ್ಳುಗದ್ದುಗೆಗೆ ಸಾಹಸ್ರಾರು ಮಂದಿ ಭಕ್ತಾಧಿಗಳು ಭಾಗವಹಿಸಿದ್ದರು.