Wednesday, March 29, 2023

Latest Posts

ವಿವಿಧೆಡೆಯ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ

ಹೊಸದಿಗಂತ ವರದಿ, ಕುಶಾಲನಗರ:

ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ನಡೆದಿದ್ದ ಎರಡು ಕಳ್ಳತನ ಸೇರಿದಂತೆ ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 12 ಲಕ್ಷ ರೂ. ಮೌಲ್ಯದ 190 ಗ್ರಾಂ ಚಿನ್ನಾಭರಣ ಮತ್ತು ಕಳ್ಳತನ‌ದ ಹಣದಲ್ಲಿ ಖರೀದಿಸಿದ್ದ
3 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಡಗು ಎಸ್ಪಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.
ಕುಶಾಲನಗರ ಡಿವೈಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಎಂ.ಪಿ.ಖಾದರ್ ಎಂಬವರ ಪುತ್ರ ಎಂ.ಎ. ಇಬ್ರಾಹಿಂ (27), ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಸುರೇಶ್ ಎಂಬವರ ಪುತ್ರ ಸುದೀಪ್ (21) ಮತ್ತು ಮಡಿಕೇರಿಯ ಅಜಾದ್ ನಗರದ ಎಂ.ಎಂ.ಮೊಹಮ್ಮದ್ ಅವರ ಪುತ್ರ ಎಂ.ಎಂ.ವಾಸಿಂ (29) ಬಂಧಿತ ಆರೋಪಿಗಳು.
ಇವರೊಂದಿಗೆ ಇನ್ನೂ ಮೂವರು ಕಳ್ಳತನದಲ್ಲಿ ಭಾಗಿಯಾಗಿರುವ ಶಂಕೆಯಿದ್ದು ಪತ್ತೆ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಳ್ಳತನಕ್ಕೆ ಬಳಸಿಕೊಳ್ಳಲಾಗಿರುವ ಬಲೆನೋ ಕಾರು (ಕೆಎ 01 ಎಂಎಂ 7724) ಮಾರುತಿ ಆಲ್ಟೋ ಕಾರು ಕೆಎ 02 ಪಿ 5378) ಮಾರುತಿ 800 (ಕೆಎ 40 ಎಂ 418) ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದ ಕುಶಾಲನಗರ ಠಾಣೆ ಹಾಗೂ ನಾಪೋಕ್ಲು ಠಾಣೆ ವ್ಯಾಪ್ತಿಯ ತಲಾ ಎರಡು, ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಒಂದು ಪ್ರಕರಣವನ್ನು ಭೇದಿಸಲಾಗಿದೆ.
ಅಡಿಷನಲ್‌ ಎಸ್ಪಿ ಕೆ.ಎಸ್. ಸುಂದರರಾಜು, ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್ ಮತ್ತು ಜಿ.ಎನ್. ಶ್ರೀಕಾಂತ ಮಾರ್ಗದರ್ಶನದಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ಪಿಎಸೈ ಗಳಾದ ಅಪ್ಪಾಜಿ, ಭಾರತಿ, ಶ್ರೀಧರ್, ಲೋಹಿತ್, ಎಎಸೈ ವೆಂಕಟೇಶ್, ಗೋಪಾಲ್, ಗಣಪತಿ, ಪೇದೆಗಳಾದ ಸತೀಶ್, ಮಂಜುನಾಥ್, ದಯಾನಂದ, ನಾಗರಾಜ್, ಸುಧೀಶ್ ಕುಮಾರ್, ಪ್ರಕಾಶ್, ಪ್ರವೀಣ್, ಸಂದೇಶ್, ದಿವೇಶ್, ರಂಜಿತ್, ಗಣೇಶ್, ಸಹನಾ, ಶರ್ಮಿಳಾ, ಸಿಡಿಆರ್ ಘಟಕದ ರಾಜೇಶ್, ಗಿರೀಶ್, ಪ್ರವೀಣ್, ಚಾಲಕರಾದ ರಾಜು, ಅರುಣ್, ಯೋಗೀಶ್ ಮತ್ತು ಶೇಷಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವರಿಗೆ ಇಲಾಖೆ ವತಿಯಿಂದ ನಗದು ಬಹುಮಾನ ಘೋಷಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!