ಹೊಸದಿಗಂತ ವರದಿ, ಮೈಸೂರು
ಇಲ್ಲಿನ ವಿದ್ಯಾರಣ್ಯಪುರಂನಲ್ಲಿರುವ ಚಿನ್ನಾಭರಣ ಮಳಿಗೆಯಲ್ಲಿ ದರೋಡೆ ಮಾಡಿ, ಪರಾರಿಯಾಗುವ ವೇಳೆ ಯುವಕನೊಬ್ಬನಿಗೆ ಗುಂಡಿಕ್ಕಿ ಕೊಂದಿದ್ದ ಪ್ರಕರಣದಲ್ಲಿ ದರೋಡೆಕೋರರಿಗೆ ಪಿಸ್ತೂಲು ಮಾರಾಟ ಮಾಡಿದ್ದ ಮುಂಬೈ ಮೂಲದ ಆರೋಪಿಯನ್ನು ಮೈಸೂರಿನ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ರಾಜನ್ ನಕುಲ್ ದಾಸ್ ಬಂಧಿತ ಆರೋಪಿ .
ಕಳೆದ ಆಗಸ್ಟ್ 23 ರಂದು ನಗರದ ವಿದ್ಯಾರಣ್ಯಪುರಂನಲ್ಲಿರುವ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೆಸ್ ಮಳಿಗೆಗೆ ನುಗ್ಗಿದ ನಾಲ್ವರು ದರೋಡೆಕೋರರ ತಂಡ, ಪಿಸ್ತೂಲ್ ತೋರಿಸಿ, ಮಾಲೀಕರನ್ನು ಬೆದರಿಸಿ ಚಿನ್ನಾಭರಣ ದೋಚಿತ್ತು. ಪರಾರಿಯಾಗುವ ವೇಳೆ ಎದುರಿಗೆ ಬಂದ ಗ್ರಾಹಕ, ದಡದಹಳ್ಳಿ ಗ್ರಾಮದ ಯುವಕ ಚಂದ್ರುವಿಗೆ ಗುಂಡಿಕ್ಕಿ ಕೊಂದಿದ್ದರು.
ವೃತ್ತಿ ವೈಷಮ್ಯಕ್ಕಾಗಿ ನಡೆದಿದ್ದ ಸದರಿ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಕೇವಲ ನಾಲ್ಕು ದಿನಗಳ ಅವಧಿಯಲ್ಲಿ ಪ್ರಕರಣವನ್ನು ಭೇದಿಸಿದ್ದರು. ಇಡೀ ಪ್ರಕರಣದಲ್ಲಿ 9 ಮಂದಿಯ ಪಾತ್ರವಿದ್ದು, ವಿವಿಧ ರಾಜ್ಯಗಳಿಗೆ ತೆರಳಿದ್ದ ವಿದ್ಯಾರಣ್ಯಪುರಂ ಇನ್‌ಸ್ಪೆಕ್ಟರ್ ರಾಜು ಮತ್ತು ತಂಡ 8 ಮಂದಿಯನ್ನು ಬಂಧಿಸಿ ಕರೆತಂದಿತ್ತು.
ದರೋಡೆಕೋರರಿಗೆ ಪಿಸ್ತೂಲು ಮಾರಾಟ ಮಾಡಿದ್ದ ರಾಜನ್, ಮುಂಬೈ ಪೊಲೀಸರಿಗೆ ಚಿರಪರಿಚಿತ. ಆತ 2021ರ ಮಾರ್ಚ್ ತಿಂಗಳಿನಲ್ಲಿ ದರೋಡೆಕೋರರಿಗೆ ಪಿಸ್ತೂಲು ಮಾರಾಟ ಮಾಡಿದ್ದ.
ಮುಂಬೈನ ಕಾಮಾಟಿಪುರದಲ್ಲಿ ವಾಸವಿದ್ದ ಆತ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ನಂತರ ಏಪ್ರಿಲ್ ತಿಂಗಳಿನಲ್ಲಿ ಆತ ಸರಗಳವು ಪ್ರಕರಣದಲ್ಲಿ ಭಾಗಿಯಾಗಿ ಮುಂಬೈ ಜೈಲು ಸೇರಿದ್ದ. ಇದೀಗ ಆತ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿರುವ ವಿಚಾರ ತಿಳಿದ ವಿದ್ಯಾರಣ್ಯಪುರಂ ಪೊಲೀಸರು ಮುಂಬೈಗೆ ತೆರಳಿ ಅಲ್ಲಿನ ನ್ಯಾಯಾಲಯದ ಅನುಮತಿ ಪಡೆದು ಆತನನ್ನು ಮೈಸೂರಿಗೆ ಕರೆತಂದು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ