ಹೊಸದಿಗಂತ ಡಿಜಿಟಲ್ ಡೆಸ್ಕ್:
ತೀವ್ರ ಸ್ವರೂಪ ಪಡೆದುಕೊಂಡಿರುವ ‘ಮುರಸು’ ಚಂಡಮಾರುತವು ಆಂಧ್ರಪ್ರದೇಶದ ಕರಾವಳಿ ತೀರಕ್ಕೆ ಅಪ್ಪಳಿಸಿದೆ. ಈ ನೈಸರ್ಗಿಕ ವಿಕೋಪದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರ್ಕಾರವು ಆಂಧ್ರಪ್ರದೇಶಕ್ಕೆ ಎಲ್ಲಾ ರೀತಿಯ ಅಗತ್ಯ ನೆರವು ಮತ್ತು ಸಹಕಾರವನ್ನು ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
ಈ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೆ ದೂರವಾಣಿ ಮೂಲಕ ಸುದೀರ್ಘ ಚರ್ಚೆ ನಡೆಸಿದ ಗೃಹ ಸಚಿವರು, ಚಂಡಮಾರುತದ ತೀವ್ರತೆ ಹಾಗೂ ಕರಾವಳಿ ಭಾಗದಲ್ಲಿ ಕೈಗೊಳ್ಳಲಾಗಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. “ಕೇಂದ್ರ ಸರ್ಕಾರವು ಆಂಧ್ರದ ಜನತೆಯೊಂದಿಗೆ ದೃಢವಾಗಿ ನಿಲ್ಲಲಿದ್ದು, ಪರಿಸ್ಥಿತಿಯನ್ನು ಎದುರಿಸಲು ಬದ್ಧವಾಗಿದೆ” ಎಂದು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಬರೆದುಕೊಂಡಿದ್ದಾರೆ.
ನೆರವಿಗೆ ಧಾವಿಸಿದ ಕರ್ನಾಟಕ
ಚಂಡಮಾರುತ ಪೀಡಿತ ಕರಾವಳಿ ಜಿಲ್ಲೆಗಳಲ್ಲಿ ಈಗಾಗಲೇ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಸಿಬ್ಬಂದಿ ಬಿಡುಗಡೆ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ಮತ್ತೊಂದೆಡೆ, ಸಂಕಷ್ಟದಲ್ಲಿರುವ ನೆರೆರಾಜ್ಯ ಆಂಧ್ರಪ್ರದೇಶದ ಸಹಾಯಕ್ಕೆ ಕರ್ನಾಟಕ ಸರ್ಕಾರವೂ ಕೈಜೋಡಿಸಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿ, ರಕ್ಷಣೆ ಮತ್ತು ಪುನರ್ನಿರ್ಮಾಣ ಕಾರ್ಯಗಳಿಗೆ ನೆರವಾಗಲು ಕರ್ನಾಟಕದ ವಿಶೇಷ ರಕ್ಷಣಾ ತಂಡಗಳು ಆಂಧ್ರಪ್ರದೇಶಕ್ಕೆ ಈಗಾಗಲೇ ರವಾನೆಯಾಗಿವೆ ಎಂದು ತಿಳಿಸಿದ್ದಾರೆ. ಈ ಕಠಿಣ ಸಮಯದಲ್ಲಿ ಸಕಾಲಿಕ ಸಹಾಯ ಹಸ್ತ ಚಾಚಿದ ಕರ್ನಾಟಕ ಸರ್ಕಾರ ಮತ್ತು ಅಲ್ಲಿನ ಜನತೆಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಗಂಟೆಗೆ 120 ಕಿ.ಮೀ ಬಿರುಗಾಳಿ; 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಆಂಧ್ರಪ್ರದೇಶದ ಹವಾಮಾನ ಇಲಾಖೆಯ ನಿರ್ದೇಶಕಿ ಕೆ. ನಾಗರತ್ನ ಅವರು ನೀಡಿರುವ ಮಾಹಿತಿ ಪ್ರಕಾರ, ಮುರಸು ಚಂಡಮಾರುತವು ಮಂಗಳವಾರ ಮುಂಜಾನೆ 03:30 ರಿಂದ 05:30 ರ ಅವಧಿಯಲ್ಲಿ ದಕ್ಷಿಣ ಕರಾವಳಿಯನ್ನು ದಾಟಿದೆ.
ಇದನ್ನೂ ಓದಿ:
ಪ್ರಸ್ತುತ ಈ ಚಂಡಮಾರುತವು ಒಂಗೋಲ್ ನಗರದಿಂದ ಸುಮಾರು 30 ಕಿಮೀ ದೂರದಲ್ಲಿ ಕೇಂದ್ರಿಕೃತವಾಗಿದ್ದು, ಗಂಟೆಗೆ 8 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಚಂಡಮಾರುತದ ಪ್ರಭಾವದಿಂದಾಗಿ ಕರಾವಳಿ ಭಾಗದಲ್ಲಿ ಗಂಟೆಗೆ 100 ರಿಂದ 110 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, ಇದು ಗರಿಷ್ಠ 120 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಕೃಷ್ಣಾ, ಗುಂಟೂರು, ಬಾಪಟ್ಲಾ, ಪಲ್ನಾಡು, ಮಾರ್ಕಾಪುರಂ ಮತ್ತು ಪ್ರಕಾಶಂ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ತೀವ್ರ ಜಾಗರೂಕರಾಗಿರಬೇಕು ಮತ್ತು ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.



