ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಿಯಕರನ ಜೊತೆ ಸೇರಿ ಪತ್ನಿಯೂ ತನ್ನ ಪತಿಯನ್ನೇ ಕೊಲೆಗೈದ ಪ್ರಕರಣದ ಆರೋಪಿ ದಿಲೀಪ್ ಹೆಗ್ಡೆ(28) ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಉಡುಪಿ ಸಂಚಾರಿ ಪೀಠ ತಿರಸ್ಕರಿಸಿದೆ.
ನ್ಯಾಯಾಂಗ ಬಂಧನದಲ್ಲಿರುವ ದಿಲೀಪ್ ಹೆಗ್ಡೆ ಸಲ್ಲಿಸಿರುವ ಜಾಮೀನು ಅರ್ಜಿಗೆ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಆಕ್ಷೇಪಣೆ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಕೊಲೆ ಮಾಡುವ ಉದ್ದೇಶದಿಂದ ಆರೋಪಿ ದಿಲೀಪ್ ಹೆಗ್ಡ ಆನ್‌ಲೈನ್ ನಲ್ಲಿ ವಿಷ ಖರೀದಿಸಿ, ಪಡೆದುಕೊಂಡಿರುವುದಕ್ಕೆ ದಾಖಲೆ ಲಭ್ಯವಾಗಿದ್ದು, ಖಾಸಗಿ ಹೋಟೆಲ್‌ನಲ್ಲಿ ದಿಲೀಪ್ ಹಾಗು ಪ್ರತಿಮಾ ಒಟ್ಟಿಗೆ ಇರುವ ದಾಖಲೆಗಳು ಇದೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದ್ದು, ಆರೋಪಿ ಪ್ರತಿಮಾ ಕೊಲೆ ಸಂಚಿನ ಬಗ್ಗೆ ಮಾತನಾಡಿರುವ ಆಡಿಯೋ ಪ್ರಕರಣಕ್ಕೆ ಪೂರಕ ಸಾಕ್ಷಿಯಾಗಿದೆ. ಅಲ್ಲದೇ ಕೊಲೆ ನಡೆದ ದಿನ, ಆ ಸ್ಥಳದಲ್ಲಿ ದಿಲೀಪ್ ಹಾಗು ಪ್ರತಿಮಾ ಒಟ್ಟಿಗೆ ಇರುವುದನ್ನು ನೋಡಿದವರು ಇದ್ದಾರೆ. ಈ ಎಲ್ಲಾ ಸಾಕ್ಷಿಗಳು ಸ್ಥಳೀಯರೇ ಆಗಿರುವುದರಿಂದ ಆರೋಪಿಗೆ ಜಾಮೀನು ಮಂಜೂರು ಮಾಡಿದರೇ ಸಾಕ್ಷಿ ನಾಶವಾಗುವ ಸಾಧ್ಯತೆ ಇದೆ ಎಂದು ವಾದಿಸಿದರು.
ದೋಷಾರೋಪಣೆ ಪಟ್ಟಿಯಲ್ಲಿನ ಸಂಗತಿಗಳು ಹಾಗು ಸರಕಾರಿ ವಕೀಲರ ವಾದವನ್ನು ಆಲಿಸಿದ ನ್ಯಾಯಾಲಯವು ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
2024ರ ಅ.20ರಂದು ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ಬಾಲಕೃಷ್ಣ ಪೂಜಾರಿ(44) ಎಂಬವರನ್ನು ಅವರ ಪತ್ನಿ ಪ್ರತಿಮಾ ಮತ್ತು ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆ ಸೇರಿ ಕೊಲೈಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಅ.25ರಂದು ಅಜೆಕಾರು ಪೊಲೀಸರು ಬಂಧಿಸಿದ್ದರು.