ಸ್ವಚ್ಛವಾಗುತ್ತಿದೆ ‘ಯಮುನಾ’: ಹತ್ತು ದಿನದಲ್ಲಿ 1,300 ಟನ್ ತ್ಯಾಜ್ಯ ಮುಕ್ತ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ವಿಚಾರವಾಗಿದ್ದ ‘ಯಮುನಾ ನದಿ’ ಯಲ್ಲಿ ಇದೀಗ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಯಮುನಾ ನದಿ ಶುದ್ದೀಕರಣಕ್ಕೆ ಆದ್ಯತೆ ನೀಡಿದೆ. ಕಳೆದ 10 ದಿನಗಳಲ್ಲಿ ನದಿಯಿಂದ 1,300 ಟನ್ ತ್ಯಾಜ್ಯವನ್ನು ಹೊರಕ್ಕೆ ತೆಗೆಯಲಾಗಿದೆ ಎಂದು ದೆಹಲಿಯ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಸಚಿವ ಪರ್ವೇಶ್ ವರ್ಮಾ ಬುಧವಾರ ತಿಳಿಸಿದರು.

ದೋಣಿಯಲ್ಲಿ ಸಾಗಿ ಯಮುನಾ ನದಿಯನ್ನು ಪರಿಶೀಲಿಸಿದ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ನೀಡಲಾಗಿದ್ದ ಯಮುನಾ ನದಿ ಸ್ವಚ್ಛತೆ ಭರವಸೆಯನ್ನು ನಮ್ಮ ಸರ್ಕಾರ ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತಂದಿದೆ. ಸರ್ಕಾರ ಅಧಿಕಾರಕ್ಕೆ ಬಳಿಕದ ಆದ್ಯತೆಯ ಮೇರೆಗೆ ನದಿ ಶುಚಿ ಕಾರ್ಯ ಆರಂಭಿಸಲಾಗಿದೆ. ಈವರೆಗೂ 1,300 ಟನ್ ತ್ಯಾಜ್ಯವನ್ನು ನದಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿದರು.

ಇತ್ತೀಚಿಗೆ ಮುಗಿದ ದೆಹಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಮುನಾ ನದಿ ಶುದ್ದೀಕರಣವೂ ಬಿಜೆಪಿ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ. ಒಳಚರಂಡಿ ಸಂಸ್ಕರಣೆಗೆ ಸಂಬಂಧಿಸಿದ ದೂರುಗಳನ್ನು ಪರಿಹರಿಸಲಾಗುವುದು ಮತ್ತು ಎರಡು ವರ್ಷಗಳಲ್ಲಿ ಎಲ್ಲಾ ಎಸ್‌ಟಿಪಿಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ ಎಂದು ಅವರು ಜನರಿಗೆ ಭರವಸೆ ನೀಡಿದರು.

ಯಮುನಾ ನದಿ ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಪುನರುಜ್ಜೀವನ ನೀಡುವುದು ನಮ್ಮ ಬದ್ಧತೆಯಾಗಿದೆ. ದೆಹಲಿ ಅಭಿವೃದ್ಧಿ ಪ್ರಾಧಿಕಾರವು ನದಿಪಾತ್ರವನ್ನು ಮರು ರೂಪಿಸುತ್ತಿದೆ. ಅತಿಕ್ರಮಣವಾದ ಜಾಗವನ್ನು ತೆರವು ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಚರಂಡಿ ನೀರು ನದಿಗೆ ಸೇರುವ 18 ಕಡೆಗಳಲ್ಲಿ ಒಳಚರಂಡಿ ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಸ್ಥಾಪಿಸಲಾಗುವುದು. ಇದರಿಂದ ತ್ಯಾಜ್ಯವು ನದಿಗೆ ಸೇರುವುದಿಲ್ಲ. ಸಾರ್ವಜನಿಕರ ದೂರುಗಳನ್ನು ಆಲಿಸಲಾಗುವುದು. ಹೊಸ ಎಸ್‌ಟಿಪಿಗಳ ಸ್ಥಾಪನೆ ಮತ್ತು ಇರುವ ಘಟಕಗಳ ದುರಸ್ತಿ ನಡೆಸಲಾಗುವುದು. ಇದನ್ನು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಪರ್ವೇಶ್​ ವರ್ಮಾ ತಿಳಿಸಿದರು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!