ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ರಾಜಭವನದ ಮುಖ್ಯದ್ವಾರದ ಸಮೀಪ ಬುಧವಾರ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಕುರಿತು ಚೆನ್ನೈ ಪೊಲೀಸರು ಇದುವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ. ಹೀಗಾಗಿ ನ್ಯಾಯಯುತ ತನಿಖೆ ಆರಂಭಿಸುವ ಮುನ್ನವೇ ಪ್ರಕರಣದ ‘ಹತ್ಯೆ’ ಮಾಡಲಾಗಿದೆ ಎಂದು ರಾಜಭವನ ದೂರಿದೆ.
ರಾಜಭವನದ ಮುಂಭಾಗದ ಬ್ಯಾರಿಕೇಡ್ ಬಳಿ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಪೆಟ್ರೋಲ್ ಬಾಟಲಿಗಳನ್ನು ಸೆಳೆಯಲು ಪ್ರಯತ್ನಿಸಿದ್ದ. ಆಗ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಗಮನಿಸಿ ಆರೋಪಿಯನ್ನು ಸುತ್ತುವರೆದಿದ್ದಾರೆ. ಕೂಡಲೇ ಆತನ ಕೈಯಲ್ಲಿದ್ದ ಇತರ ಬಾಟಲಿಗಳನ್ನೂ ವಶಕ್ಕೆ ಪಡೆದಿದ್ದಾರೆ. ನಂತರ ಗಸ್ತು ಪಡೆಯ ಸಿಬ್ಬಂದಿಗೆ ಆರೋಪಿಯನ್ನು ಒಪ್ಪಿಸಿ ಠಾಣೆಗೆ ಕರೆದೊಯ್ಯಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ರಾಜಭವನ ಮುಂದೆ ಸಂಪೂರ್ಣವಾದ ಬಂದೋಬಸ್ತ್ ಇತ್ತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರೇಮ್ ಆನಂದ್ ಸಿನ್ಹಾ ಬುಧವಾರ ಮಾಹಿತಿ ನೀಡಿದ್ದರು. ಈಗಾಗಲೇ, ಆರೋಪಿಯ ವಿರುದ್ಧ ಆರೇಳು ಪ್ರಕರಣಗಳು ದಾಖಲಾಗಿವೆ ಎಂದು ಅವರು ವಿವರಿಸಿದ್ದರು.
ಇತ್ತ ಈ ಘಟನೆಯ ಸಂಬಂಧ ಪೊಲೀಸರ ವಿರುದ್ಧ ರಾಜಭವನ ಗುರುವಾರ ತೀವ್ರ ಅಸಮಾಧಾನ ಹೊರಹಾಕಿದೆ. ದಾಳಿ ಸಂಬಂಧ ಪೊಲೀಸರು ರಾಜಭವನದ ದೂರನ್ನು ದಾಖಲಿಸಿಕೊಂಡಿಲ್ಲ. ಪೊಲೀಸರು ಸ್ವಯಂಪ್ರೇರಿತವಾಗಿ ದಾಳಿಯನ್ನು ಸಾಮಾನ್ಯ ವಿಧ್ವಂಸಕ ಕೃತ್ಯವೆಂದು ದುರ್ಬಲಗೊಳಿಸಿದ್ದಾರೆ. ತರಾತುರಿಯಲ್ಲಿ ಮಧ್ಯರಾತ್ರಿ ಮ್ಯಾಜಿಸ್ಟ್ರೇಟ್ ಅವರನ್ನು ಎಬ್ಬಿಸಿ ಆರೋಪಿಯನ್ನು ಹಾಜರುಪಡಿಸಿ, ಜೈಲಿಗೆ ರವಾನಿಸಿದ್ದಾರೆ. ದಾಳಿಯ ಹಿಂದಿರುವವರು ಬಹಿರಂಗವಾಗಬಹುದು ಎಂಬ ಕಾರಣಕ್ಕೆ ವಿವರವಾದ ತನಿಖೆಯನ್ನು ತಡೆಹಿಡಿಯಲಾಗಿದೆ. ನ್ಯಾಯಯುತ ತನಿಖೆ ಆರಂಭಿಸುವ ಮುನ್ನವೇ ಅದರ ಹತ್ಯೆ ನಡೆದಿದೆ ಎಂದು ರಾಜಭವನ ಹೇಳಿಕೆ ಬಿಡುಗಡೆ ಮಾಡಿದೆ.
ಮತ್ತೊಂದೆಡೆ, ಘಟನೆ ನಡೆದ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರಾಜಭವನದ ಉಪ ಕಾರ್ಯದರ್ಶಿ ದೂರು ಸಲ್ಲಿಸಿದ್ದರು. ರಾಜ್ಯದ ಸಂವಿಧಾನಿಕ ಮುಖ್ಯಸ್ಥರ ವಿರುದ್ಧ ಘೋರ ಹಾಗೂ ಗಂಭೀರವಾದ ದಾಳಿ ನಡೆದಿದೆ. ರಾಜಭವನದ ಮುಖ್ಯದ್ವಾರ 1 ಬಳಿ ಕೆಲವು ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್‌ಗಳನ್ನು ಹಿಡಿದು ಒಳನುಗ್ಗಲು ಪ್ರಯತ್ನಿಸಿದರು. ಆದಾಗ್ಯೂ, ಎಚ್ಚೆತ್ತುಕೊಂಡ ಕಾವಲುಗಾರರು ದುಷ್ಕರ್ಮಿಗಳನ್ನು ರಾಜಭವನ ಪ್ರವೇಶಿಸದಂತೆ ತಡೆದರು. ಗಂಭೀರವಾದ ಅಹಿತಕರ ಘಟನೆಯನ್ನು ತಪ್ಪಿಸಲಾಯಿತು ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದರು.
— RAJ BHAVAN, TAMIL NADU (@rajbhavan_tn) October 26, 2023
ಐಪಿಸಿ ಸೆಕ್ಷನ್ 124 ಮತ್ತು ಕಾನೂನಿನ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಸೂಕ್ತ ತನಿಖೆ ನಡೆಸಿ ದಾಳಿಯ ಹಿಂದಿನ ಸಂಚುಕೋರರು ಸೇರಿದಂತೆ ಎಲ್ಲ ಭಾಗಿದಾರರಿಗೆ ಸರಿಯಾದ ಶಿಕ್ಷೆ ಮತ್ತು ಗೌರವಾನ್ವಿತ ರಾಜ್ಯಪಾಲರಿಗೆ ಸೂಕ್ತ ಭದ್ರತೆಯನ್ನು ಖಚಿತಪಡಿಸಲು ವಿನಂತಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದರು.