ಆರ್ಥಿಕವಾಗಿ ಹಿಂದುಳಿದವರಿಗೆ ಉದ್ದಿಮೆ ಸ್ಥಾಪನೆಗೆ ಸಬ್ಸಿಡಿ: ಸಚಿವ ನಿರಾಣಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಳಗಾವಿ: ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯಮ ಸ್ಥಾಪನೆಗೆ ಅನುಕೂಲವಾಗುವಂತೆ ಕೆಐಎಡಿಬಿಯಿಂದ ಕೈಗಾರಿಕಾ ನಿವೇಶನಕ್ಕೆ ಶೇ. 75ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ ತಿಳಿಸಿದ್ದಾರೆ.

ಅವರು ಶುಕ್ರವಾರ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಎಪಿಜೆ ಅಬ್ದುಲ್ ಕಲಾಂ ಆಡಿಟೋರಿಯಂನಲ್ಲಿ ‘ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಕ್ರಮ ಉದ್ಘಾಟಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ದಿಮೆದಾರರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅವರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಕೆಐಎಡಿಬಿ)ಯಿಂದ ಕೈಗಾರಿಕೆ ನಿವೇಶನಕ್ಕೆ ಶೇ. ೭೫ರಷ್ಟು ರಿಯಾಯಿತಿ ನೀಡಲಾಗುತ್ತದೆ. ಅದೇ ರೀತಿ ಆರ್ಥಿಕವಾಗಿ ಹಿಂದುಳಿದವರಿಗೂ ಶೇ. ೭೫ರಷ್ಟು ರಿಯಾಯಿತಿ ನೀಡಲಾಗುವುದು ಎಂದವರು ಹೇಳಿದರು.

ಬೆಳಗಾವಿ ಅಲ್ಲದೇ, ಧಾರವಾಡ, ಉತ್ತರಕನ್ನಡ, ವಿಜಯಪುರ, ಬಾಗಲಕೋಟೆ, ಹಾವೇರಿ ಹಾಗೂ ಗದಗದ ಸುಮಾರು 11 ಸಾವಿರ ವಿದ್ಯಾರ್ಥಿಗಳು ಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಬಹಳ ಸಂತಸದ ವಿಚಾರ. ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿರುವವರ ಪೈಕಿ ಉದ್ಯಮ ಸ್ಥಾಪಿಸುವ ಆಸಕ್ತಿ ತೋರುವವರಿಗೆ ಅವರ ಆಯ್ಕೆಯ ಕ್ಷೇತ್ರದಲ್ಲಿ ಒಂದು ವಾರದಿಂದ ಒಂದು ತಿಂಗಳವರೆಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಆರಂಭದಿಂದ ಕೊನೆಯವರೆಗೆ ಎಲ್ಲ ರೀತಿಯ ಸಹಕಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಕೈಗಾರಿಕಾ ಅದಾಲತ್

ಉದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯು ಬೆಳಗಾವಿ ವಿಭಾಗದಲ್ಲಿ ಶುಕ್ರವಾರ ‘ಕೈಗಾರಿಕಾ ಅದಾಲತ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೈಗಾರಿಕಾ ಅದಾಲತ್ ಮೂಲಕ ಸರಕಾರವೇ ಉದ್ಯಮಿಗಳ ಮನೆ ಬಾಗಿಲಿಗೆ ಹೋಗಿ ಉದ್ಯಮಿಗಳ ಸಮಸ್ಯೆ ಆಲಿಸಿ, ಸಮಸ್ಯೆ ಇತ್ಯರ್ಥ ಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಸಚಿವರು ತಿಳಿಸಿದರು. ಜಿಲ್ಲೆಯಿಂದ ನಾನಾ ಇಲಾಖೆಗಳಿಗೆ ಸಂಬಂಧಿಸಿದ ಒಟ್ಟು 77 ಅರ್ಜಿಗಳು ಬಂದಿವೆ. ಈಗಾಗಲೇ ಕೆಲವರ ಸಮಸ್ಯೆಗೆ ಪರಿಹಾರ ಸೂಚಿಸಲಾಗಿದೆ. ಇನ್ನು ಕೆಲವು ಅರ್ಜಿಗಳ ಕುರಿತು ಕೈಗಾರಿಕಾ ಅದಾಲತ್‌ನಲ್ಲಿ ನೇರವಾಗಿ ಉದ್ಯಮಿಗಳ ಜೊತೆ ಚರ್ಚಿಸಿ, ಪರಿಹಾರ ಸೂಚಿಸಲಾಗಿದೆ ಎಂದರು.

ವಿದ್ಯುತ್ ಸರಬರಾಜು ಕಂಪನಿ, ಪೌರಾಡಳಿತ ಇಲಾಖೆ, ನಗರಾಭಿವೃದ್ಧಿ ಇಲಾಖೆ, ನಗರ ಯೋಜನಾ ಇಲಾಖೆ, ಕಾರ್ಮಿಕ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗುತ್ತದೆ ಎಂದು ಸಚಿವ ನಿರಾಣಿ ಭರವಸೆ ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!