ಪರಶುರಾಮ ಜಯಂತಿ ಧ್ವಜಗಳಿಗೆ ಮುಸ್ಲೀಮರ ಆಕ್ಷೇಪ: ಕಲ್ಲು ತೂರಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜಸ್ಥಾನದ ಜೋಧ್‌ ಪುರದಲ್ಲಿ ಧಾರ್ಮಿಕ ಧ್ವಜಗಳನ್ನು ಇಳಿಸುವ ಕುರಿತಾಗಿ ಹಿಂದೂ ಮುಸ್ಲಿಂ ಸಮುದಾಯದ ನಡುವೆ ಗಲಭೆಯುಂಟಾಗಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಜೋಧ್‌ ಪುರದ ಜಲೋರಿ ಗೇಟ್‌ ಪ್ರದೇಶದಲ್ಲಿ ಸ್ವಾತಂತ್ರ್ಯಹೋರಾಟಗಾರರ ಪ್ರತಿಮೆಯ ಮೇಲೆ ಧ್ವಜ ಹಾರಿಸುವ ಕುರಿತಾಗಿ ಎರಡು ಗುಂಪಿನ ನಡುವೆ ಘರ್ಷಣೆಯುಂಟಾಗಿ ಕಲ್ಲು ತೂರಾಟ ನಡೆಯಿತು. ಈ ಸಂದರ್ಭದಲ್ಲಿ ಗಲಾಟೆ ನಿಲ್ಲಿಸುವ ಪ್ರಯತ್ನದಲ್ಲಿದ್ದ 4 ಮಂದಿ ಪೋಲೀಸರಿಗೆ ಗಾಯಗಳಾಗಿವೆ. ಪರಿಸ್ಥಿತಿಯನ್ನು ನಿಭಾಯಿಸಲು ಅ ಪ್ರದೇಶದಲ್ಲಿ ಇಂಟರ್‌ ನೆಟ್‌ ಸಂಪರ್ಕ ಸ್ಥಗಿತಗೊಳಿಸಲಾಗಿದೆ.

ಈದ್‌ ದಿನವೇ ಪರಶುರಾಮ ಜಯಂತಿಯೂ ಇದ್ದು, ಈ ಸಂದರ್ಭದಲ್ಲಿ ಹಾಕಲಾಗಿದ್ದ ಧ್ವಜಗಳ ಕುರಿತಾಗಿ ಮುಸ್ಲೀಮರು ಮತ್ತು ಹಿಂದೂಗಳೊಂದಿಗೆ ಘರ್ಷಣೆಯಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈದ್‌ ನಮಾಜ್‌ ಮಾಡಲು ಬಂದಿದ್ದ ಮುಸ್ಲೀಮರು ಇಂದು ಈದ್‌ ಆಗಿರುವುದರಿಂದ ಆ ಧ್ವಜಗಳನ್ನು ತೆಗೆದು ಹಾಕುವಂತೆ ಒತ್ತಾಯ ಮಾಡಿದ್ದಾರೆ. ಈ ಸಂಬಂಧ ಗಲಾಟೆಯಾಗಿ ಪೋಲೀಸರು ಪರಿಸ್ಥಿತಿ ನಿಭಾಯಿಸುವ ಮುನ್ನವೇ ಕಲ್ಲು ತೂರಾಟ ಪ್ರಾರಂಭವಾಗಿದೆ. ನಿನ್ನೆ ರಾತ್ರಿ 11 ಗಂಟೆಯ ಅಸುಪಾಸಿನಲ್ಲಿ ಘಟನೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಈ ಸಂಬಂಧ ಇಂದು ಮುಂಜಾನೆಯೂ ಕೂಡ ಕಲ್ಲುತೂರಾಟ ನಡೆದಿದ್ದು ಪರಿಸ್ಥಿತಿ ಶಾಂತ ಗೊಳಿಸಲು ಇಂಟರ್ನೆಟ್‌ ಅನ್ನು ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!