ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಕೆ ಅಣ್ಣಾಮಲೈ ಗೆದ್ದೇ ಗೆಲ್ಲುತ್ತಾರೆ ಅನ್ನೋ ವಿಶ್ವಾಸ ಮೂಡಿತ್ತು. ಆದರೆ ಫಲಿತಾಂಶ ಸಂಪೂರ್ಣ ಬದಲಾಗಿದ್ದು, ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತರೆಯಲಿಲ್ಲ. ಕೊಯಂಬತ್ತೂರಿನಿಂದ ಸ್ಪರ್ಧಿಸಿದ ಅಣ್ಣಾಮಲೈ 1.18 ಲಕ್ಷ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
ಇತ್ತ ಅಣ್ಣಾಮಲೈ ಸೋಲನ್ನು ಡಿಎಂಕೆ ನಾಯಕಿ, ಮಾಜಿ ಸಿಎಂ ಕರುಣಾನಿಧಿ ಪುತ್ರಿ ಕನ್ನಿಮೋಳಿ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ ಅಣ್ಣಾಮಲೈ, ನನ್ನ ತಂದೆ ಕರುಣಾನಿದಿಯಾಗಿದ್ದರೆ ನಾನು ಸುಲಭದಲ್ಲಿ ಗೆಲ್ಲುತ್ತಿದ್ದೆ ಎಂದಿದ್ದಾರೆ.
ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ ಅಣ್ಣಾಮಲೈ, ನನ್ನ ತಂದೆ ಕರುಣಾನಿಧಿಯಾಗಿದ್ದರೆ ನಾನು ಗೆಲ್ಲುತ್ತಿದ್ದೆ. ಆದರೆ ನನ್ನ ತಂದೆ ಕುಪ್ಪುಸ್ವಾಮಿ. ಹೀಗಾಗಿ ಗೆಲುವಿಗೆ ಇನ್ನಷ್ಟು ಪರಿಶ್ರಮ ಬೇಕಿದೆ. ಗೆಲುವಿಗೆ ಕೆಲ ಸಮಯ ತೆಗೆದುಕೊಳ್ಳಲಿದೆ ಎಂದು ತಿರುಗೇಟು ನೀಡಿದ್ದಾರೆ.
ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವೋಟ್ ಶೇರ್ ಶೇಕಡಾ 11ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ ಬಿಜೆಪಿಯನ್ನು ನೋಟಾ ಪಾರ್ಟಿ ಎಂದು ಹೀಯಾಳಿಸುತ್ತಿದ್ದರು. ಈ ಚುನಾವಣೆಯಲ್ಲಿ ತಮಿಳುನಾಡು ಬಿಜೆಪಿಯತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ. ಇದೀಗ ಹಲವರು ನಮ್ಮ ಸೋಲನ್ನು ಸಂಭ್ರಮಿಸುತ್ತಿದ್ದಾರೆ. ಆದರೆ 2026ರಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಎಚ್ಚರಿಸಿದ್ದಾರೆ.
ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆದಿಲ್ಲ, ಗೆಲುವು ಸಿಕ್ಕಿಲ್ಲ. ಶೇಕಡಾ 11 ರಷ್ಟು ವೋಟ್ ಶೇರ್ ಪಡೆದಿದ್ದೇವೆ. ಈ ವೋಟ್ ಶೇರ್ ಯಾವುದೇ ಹಣ ನೀಡಿ ಬಂದಿಲ್ಲ. ನಮ್ಮ ಕಾರ್ಯಕರ್ತರು ಗ್ರೌಂಡ್ ಲೆವೆಲ್‌ನಲ್ಲಿ ಕೆಲಸ ಮಾಡಿದ್ದಾರೆ. ಪರಿಶ್ರಮದಿಂದ ಕೆಲಸ ಮಾಡಿ ಪಕ್ಷ ಕಟ್ಟಲಾಗಿದೆ. 2026ರ ವೇಳೆಗೆ ತಮಿಳುನಾಡಿನಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಲಿದೆ ಎಂದಿದ್ದಾರೆ. ಈ ಬಾರಿಯ ಹಲವು ಕ್ಷೇತ್ರದಲ್ಲಿ ಬಿಜೆಪಿಯ ಹೆಸರೇ ಇರಲಿಲ್ಲ. ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲದ ಊರಿನಲ್ಲೂ ಮತ ಪಡೆದಿದ್ದೇವೆ. ಸೋಲನ್ನು ಸ್ವೀಕಾರ ಮಾಡುತ್ತೇವೆ. ಆದರೆ ಇಲ್ಲಿಗೆ ನಿಲ್ಲುವುದಿಲ್ಲ. ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟುತ್ತೇವೆ ಎಂದು ಅಣ್ಣಾಮಲೈ ಹೇಳಿದ್ದಾರೆ.