Tuesday, August 16, 2022

Latest Posts

“ನನ್ನ ಗೆಳೆಯ ಅಬೆ”- ಜಪಾನ್ ಮಾಜಿ ಪ್ರಧಾನಿಗೆ ನರೇಂದ್ರ ಮೋದಿಯವರ ಆಪ್ತ ನುಡಿನಮನದ ಪೂರ್ಣ ಕನ್ನಡಾನುವಾದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶಿಂಜೋ ಅಬೆ, ಜಪಾನ್‌ನ ಅತ್ಯುತ್ತಮ ನಾಯಕ, ಉನ್ನತ ಜಾಗತಿಕ ರಾಜಕಾರಣಿ ಮತ್ತು ಭಾರತ-ಜಪಾನ್ ಸ್ನೇಹದ ಶ್ರೇಷ್ಠ ಚಾಂಪಿಯನ್. ಆದರೀಗ ಅವರು ನಮ್ಮೊಂದಿಗಿಲ್ಲ. ಜಪಾನ್ ಹಾಗೂ ಜಗತ್ತು ಒಬ್ಬ ಮಹಾನ್ ದಾರ್ಶನಿಕನನ್ನು ಕಳೆದುಕೊಂಡಿದೆ. ಮತ್ತು ನಾನು ಒಬ್ಬ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ.

ನಾನು ಅವರನ್ನು ಮೊದಲು ಭೇಟಿಯಾದದ್ದು 2007ರಲ್ಲಿ, ಆ ಸಂದರ್ಭದಲ್ಲಿ ನಾನು ಗುಜರಾತ್‌ ಮುಖ್ಯಮಂತ್ರಿಯಾಗಿದ್ದೆ. ಆ ಮೊದಲ ಭೇಟಿಯಿಂದಲೇ, ನಮ್ಮ ಸ್ನೇಹವು ಕಛೇರಿಯ ಸಂಕೋಲೆಗಳು, ಅಧಿಕೃತ ಪ್ರೋಟೋಕಾಲ್‌ ಗಳನ್ನೆಲ್ಲ ಮೀರಿತ್ತು.
ನಂತರದ ಭೇಟಿಗಳಲ್ಲಿ ಕ್ಯೋಟೋದಲ್ಲಿನ ತೋಜಿ ದೇವಸ್ಥಾನಕ್ಕೆ ನಮ್ಮ ಭೇಟಿ, ಶಿಂಕನ್‌ಸೆನ್‌ನಲ್ಲಿನ ನಮ್ಮ ರೈಲು ಪ್ರಯಾಣ, ಅಹಮದಾಬಾದ್‌ನ ಸಾಬರಮತಿ ಆಶ್ರಮಕ್ಕೆ ನಮ್ಮ ಭೇಟಿ, ಕಾಶಿಯಲ್ಲಿ ಗಂಗಾ ಆರತಿ, ಟೋಕಿಯೊದಲ್ಲಿ ಚಹಾ ಸಮಾರಂಭ ಹೀಗೆ ನಮ್ಮ ಅವಿಸ್ಮರಣೀಯ ಸಂವಾದಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮೌಂಟ್ ಫ್ಯೂಜಿಯ ತಪ್ಪಲಿನಲ್ಲಿ ನೆಲೆಸಿರುವ ಯಮನಾಶಿ ಪ್ರಿಫೆಕ್ಚರ್‌ನಲ್ಲಿರುವ ಅವರ ಕುಟುಂಬದ ಮನೆಗೆ ನನ್ನನ್ನು ಆಹ್ವಾನಿಸಿದ ಅವರ ಬಾಂಧವ್ಯವನ್ನು ನಾನು ಯಾವಾಗಲೂ ಗೌರವಿಸುತ್ತೇನೆ.

2007 ರಿಂದ 2012ರ ನಡುವೆ ಮತ್ತು 2020ರ ನಂತರವೂ ಅವರು ಪ್ರಧಾನಿಯಾಗಿಲ್ಲದಿದ್ದರೂ ನಮ್ಮ ನಡುವಿನ ಸ್ನೇಹ ಸಂಬಂಧವು ಗಟ್ಟಿಯಾಗಿತ್ತು. ಅವರೊಂದಿಗಿನ ಪ್ರತಿಭೇಟಿಯೂ ಬೌದ್ಧಿಕವಾಗಿ ಉತ್ತೇಜನಕಾರಿಯಾಗಿರುತ್ತಿತ್ತು. ಅವರ ಆಲೋಚನೆಗಳು ಯಾವಾಗಲೂ ಆಡಳಿತ, ಆರ್ಥಿಕತೆ, ಸಂಸ್ಕೃತಿ, ವಿದೇಶಾಂಗ ನೀತಿ ಮತ್ತು ಇತರ ಹಲವಾರು ವಿಷಯಗಳ ಕುರಿತಾದ ಒಳನೋಟಗಳಿಂದ ತುಂಬಿರುತ್ತಿತ್ತು. ಅವರ ಸಲಹೆಗಳು ಗುಜರಾತ್‌ ನ ಆರ್ಥಿಕತೆಯ ಕುರಿತಾಗಿ ಆಯ್ಕೆ ಮಾಡುವಲ್ಲಿ ನನಗೆ ಸ್ಫೂರ್ತಿತುಂಬಿತು. ಜಪಾನ್ ನೊಂದಿಗೆ ಗುಜರಾತ್ ಅತ್ಯುತ್ತಮ ಪಾಲುದಾರಿಕೆ ಹೊಂದುವಲ್ಲಿ ಅವರ ಬೆಂಬಲ ಅತ್ಯಂತ ಪ್ರಮುಖವಾದದ್ದು.

ನಂತರದಲ್ಲಿ ಭಾರತ ಮತ್ತು ಜಪಾನ್‌ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಅಭೂತಪೂರ್ವ ಬದಲಾವಣೆ ತರಲು ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಬಹುಪಾಲು ಸಂಕುಚಿತವಾಗಿದ್ದ ಆರ್ಥಿಕ ಸಂಬಂಧವನ್ನು ವಿಶಾಲವಾಗಿ ಹಾಗೂ ಸಮಗ್ರವಾಗಿ ಪರಿವರ್ತಿಸಲು ಅಬೆಸ್ಯಾನ್‌ ಸಹಾಯ ಮಾಡಿದರು, ಇದು ರಾಷ್ಟ್ರದ ಅಭಿವೃದ್ಧಿಯ ಪ್ರತಿಯೊಂದು ಕ್ಷೇತ್ರವನ್ನು ಒಳಗೊಂಡಿದ್ದಲ್ಲದೇ ನಮ್ಮ ಎರಡು ದೇಶಗಳ ಪ್ರಾದೇಶಿಕ ಭದ್ರತೆಯಲ್ಲಿ ಪ್ರಮುಖಪಾತ್ರ ವಹಿಸಿತು. ಅವರ ಪಾಲಿಗೆ ಈ ಸಂಬಂಧವು ಎರಡು ದೇಶಗಳಿಗೆ ಮಾತ್ರವಲ್ಲದೇ ಪ್ರಪಂಚದ ಜನರಿಗೆ ಒಳಿತು ಮಾಡುವ ಪರಿಣಾಮಮಕಾರಿ ಸಂಬಂಧಗಳಲ್ಲೊಂದಾಗಿದೆ. ಜಪಾನ್‌ ದೇಶದ ಪಾಲಿಗೆ ಅತ್ಯಂತ ಕಷ್ಟಕರವೆನಿಸಿದರೂ ಅವರು ಭಾರತದೊಂದಿಗೆ ನಾಗರಿಕ ಪರಮಾಣು ಒಪ್ಪಂದವನ್ನು ಅನುಸರಿಸುವಲ್ಲಿ ದೃಢ ನಿಶ್ಚಯ ಹೊಂದಿದ್ದರು ಹಾಗೂ ಭಾರತದಲ್ಲಿ ಹೈಸ್ಪೀಡ್‌ ರೈಲು ತರಲು ಅತ್ಯಂತ ಉದಾರವಾದ ನಿಯಮಗಳನ್ನು ಜಾರಿಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಸ್ವತಂತ್ರ ಭಾರತದ ಪಯಣದ ಪ್ರಮುಖ ಮೈಲಿಗಲ್ಲುಗಳಲ್ಲಿ ಹಾಗೂ ನವಭಾರತದ ಅಭಿವೃದ್ಧಿಯಲ್ಲಿ ಜಪಾನ್‌ ಹೆಗಲುಕೊಟ್ಟಿದೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

2021 ರಲ್ಲಿ ಅವರಿಗೆ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡುವುದರ ಮೂಲಕ ಭಾರತ-ಜಪಾನ್ ಸಂಬಂಧಗಳಿಗೆ ಅವರ ಸಮೃದ್ಧ ಕೊಡುಗೆಗಳನ್ನು ಗುರುತಿಸಿ ಗೌರವಿಸಲಾಗಿದೆ.

ಜಾಗತಿಕವಾಗಿ ನಡೆಯುತ್ತಿರುವ ಸಂಕೀರ್ಣತೆಗಳು ಹಾಗೂ ಬಹುಪರಿವರ್ತನೆಗಳ ಕುರಿತು ಆಬೆ ಸ್ಯಾನ್‌ ಆಳವಾದ ಒಳನೋಟ ಹೊಂದಿದ್ದರು. ರಾಜಕೀಯ, ಸಾಮಾಜಿಕ, ಆರ್ಥಿಕತೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಕುರಿತಾಗಿ ದೂರದೃಷ್ಟಿಯ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಬುದ್ಧಿವಂತಿಕೆ ಅವರಲ್ಲಿತ್ತು. ಸಾಂಪ್ರದಾಯಿಕ ರೂಢಿಗಳ ನಡುವೆಯೂ ಸಹ ಸ್ಪಷ್ಟ ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ತನ್ನ ಜನರನ್ನು ಮತ್ತು ಜಗತ್ತನ್ನು ತನ್ನೊಂದಿಗೆ ಕೊಂಡೊಯ್ಯಬಲ್ಲ ಅತಿ ವಿರಳವಾದ ಅಪರೂಪದ ಶಕ್ತಿ ಅವರಿಗಿತ್ತು. ಅವರ ದೂರಗಾಮಿ ನೀತಿಗಳು, ಅಬೆನೊಮಿಕ್ಸ್‌ ಗಳು (ಎರಡನೆ ಬಾರಿ ಪ್ರಧಾನಿಯಾಗಿ ಆಯ್ಕೆಯಾದಾಗ ಶಿಂಜೋ ಅಬೆ ತೆಗೆದುಕೊಂಡ ಆರ್ಥಿಕ ನಿರ್ಧಾರಗಳು) ಜಪಾನಿನ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಿತು. ನೂತನ ಆವಿಷ್ಕಾರ ಮತ್ತು ಉದ್ಯಮಶೀಲತೆಯ ಚೈತನ್ಯವನ್ನು ಅಲ್ಲಿನ ಜನರಲ್ಲಿ ಬೆಳಗಿಸಿತು.

ನಮ್ಮ ಕಾಲದ ಬದಲಾವಣೆಗಳ ಅಲ ಹಾಗೂ ಸವಾಲಿನ ಹೆದ್ದೆರೆಗಳನ್ನು ಗುರುತಿಸುವ ಅವರ ದೂರದೃಷ್ಟಿತ್ವ ಹಾಗೂ ಅದಕ್ಕೆ ಪ್ರತಿಕ್ರಿಯಿಸುವ ಅವರ ನಾಯಕತ್ವ ಅವರು ನಮಗೆ ನೀಡಿದ ಶ್ರೇಷ್ಠ ಕೊಡುಗೆಳಲ್ಲೊಂದು. ಜಗತ್ತು ಇದನ್ನು ಯಾವಾಗಲೂ ಸ್ಮರಿಸಿಕೊಳ್ಳುತ್ತದೆ. ಇತರರಿಗಿಂತ ಬಹಳ ಹಿಂದೆಯೇ, 2007ರಲ್ಲಿ ಅವರು ಭಾರತೀಯ ಸಂಸತ್ತಿನ ತಮ್ಮ ಭಾಷಣದಲ್ಲಿ ಈ ಶತಮಾನದಲ್ಲಿ ಜಗತ್ತನ್ನು ರೂಪಿಸುವ ಪ್ರದೇಶವಾಗಬಲ್ಲ ಇಂಡೋ ಪೆಸಿಫಿಕ್ ಪ್ರದೇಶವು ಸಮಕಾಲೀನ, ರಾಜಕೀಯ ಹಾಗೂ ಆರ್ಥಿಕವಾಗಿ ಹೊರಹೊಮ್ಮಲು ಭದ್ರ ಬುನಾದಿಯನ್ನು ಹಾಕಿದರು. ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ, ಅಂತರರಾಷ್ಟ್ರೀಯ ಕಾನೂನು ಮತ್ತು ನಿಯಮಗಳ ಅನುಸರಣೆ, ಅಂತರರಾಷ್ಟ್ರೀಯ ಶಾಂತಿಯುತ ನಡವಳಿಕೆ ಮುಂತಾದ ಮೌಲ್ಯಗಳ ಆಧಾರದ ಮೇಲೆ ಈ ಪ್ರದೇಶದ ಸ್ಥಿರ, ಸುರಕ್ಷಿತ, ಶಾಂತಿಯುತ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಗಟ್ಟಿಯಾದ ಚೌಕಟ್ಟು ನಿರ್ಮಿಸುವಲ್ಲಿ ಮುಂದಾಳತ್ವ ವಹಿಸಿದರು.

ಕ್ವಾಡ್, ASEAN ನೇತೃತ್ವದ ವೇದಿಕೆಗಳು, ಇಂಡೋ ಪೆಸಿಫಿಕ್ ಸಾಗರಗಳ ಉಪಕ್ರಮ, ಆಫ್ರಿಕಾ ಸೇರಿದಂತೆ ಇಂಡೋ-ಪೆಸಿಫಿಕ್‌ನಲ್ಲಿ ಭಾರತ-ಜಪಾನ್ ಅಭಿವೃದ್ಧಿ ಸಹಕಾರ ಮತ್ತು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟವು ಅವರ ಕೊಡುಗೆಗಳಿಂದ ಪ್ರಯೋಜನ ಪಡೆದಿವೆ.

ಶಾಂತವಾಗಿ ಮತ್ತು ಅಬ್ಬರವಿಲ್ಲದೆ, ಮತ್ತು ಸ್ವದೇಶದಲ್ಲಿ ಹಿಂಜರಿಕೆ ಮತ್ತು ವಿದೇಶದಲ್ಲಿ ಸಂದೇಹವನ್ನು ನಿವಾರಿಸಿ, ರಕ್ಷಣೆ, ಸಂಪರ್ಕ, ಮೂಲಸೌಕರ್ಯ ಮತ್ತು ಸುಸ್ಥಿರತೆ ಸೇರಿದಂತೆ ಜಪಾನ್‌ನ ಕಾರ್ಯತಂತ್ರವನ್ನು ಇಂಡೋ ಫೆಸಿಫಿಕ್‌ ಭಾಗಗಳಲ್ಲಿ ಅವರು ಪರಿವರ್ತಿಸಿದರು. ಆದ್ದರಿಂದಲೇ ಈ ಪ್ರದೇಶವು ತನ್ನ ಭವಿಷ್ಯದ ಬಗ್ಗೆ ಹೆಚ್ಚು ಆಶಾವಾದಿಯಾಗಿದೆ ಮತ್ತು ಪ್ರಪಂಚವು ತನ್ನ ಭವಿಷ್ಯದ ಬಗ್ಗೆ ಹೆಚ್ಚು ವಿಶ್ವಾಸ ಹೊಂದಿದೆ.

ಈ ವರ್ಷದ ಮೇನಲ್ಲಿ ನನ್ನ ಜಪಾನ್ ಭೇಟಿಯ ಸಂದರ್ಭದಲ್ಲಿ, ಜಪಾನ್-ಇಂಡಿಯಾ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅಬೆ ಸಾನ್ ಅವರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಅವರದ್ದು ತುಂಬಾ ಆಕರ್ಷಕವಾದ, ವರ್ಚಸ್ಸು ಹೊಂದಿದ ಹಾಸ್ಯಮಿಶ್ರಿತ ಮತ್ತು ಸಾಮಾನ್ಯ ವ್ಯಕ್ತಿತ್ವಗಳ ಸಮ್ಮಿಳಿತ ವ್ಯಕ್ತಿತ್ವ. ಭಾರತ-ಜಪಾನ್ ಸೌಹಾರ್ದವನ್ನು ಇನ್ನಷ್ಟು ಬಲಪಡಿಸುವುದು ಹೇಗೆ ಎಂಬುದರ ಕುರಿತು ಅವರು ಹೊಸ ಆಲೋಚನೆಗಳನ್ನು ಹೊಂದಿದ್ದರು. ಅಂದು ಅವರಿಗೆ ವಿದಾಯ ಹೇಳುವಾಗ , ಅದು ನಮ್ಮ ಅಂತಿಮ ಸಭೆಯಾಗಬಹುದು ಎಂದು ನಾನು ಊಹಿಸಿರಲೂ ಇಲ್ಲ. ಅವರ ಬುದ್ಧಿವಂತಿಕೆ, ಉದಾರತೆ, ಸ್ನೇಹ ಮತ್ತು ಮಾರ್ಗದರ್ಶನಕ್ಕಾಗಿ ನಾನು ಯಾವಾಗಲೂ ಅವರಿಗೆ ಋಣಿಯಾಗಿರುತ್ತೇನೆ ಮತ್ತು ಪ್ರೀತಿಯಿಂದ ಸದಾ ಸ್ಮರಿಸಿಕೊಳ್ಳುತ್ತೇನೆ.

ಭಾರತವು ತನ್ನದೇ ವ್ಯಕ್ತಿಯೊಬ್ಬನ್ನು ಕಳೆದುಕೊಂಡಿತೆಂದು ಭಾವಿಸಿ ಅವರಿಗಾಗಿ ಶೋಕಿಸುತ್ತೇವೆ. ಅವರು ಯಾವುದನ್ನು ಹೆಚ್ಚು ಇಷ್ಟ ಪಡುತ್ತಿದ್ದರೋ ಅದನ್ನೇ ಮಾಡುತ್ತಾ ಕೊನೆಯುಸಿರೆಳೆದರು. ಅವರು ಯಾವಾಗೂ ತಮ್ಮ ಜನರನ್ನು ಪ್ರೇರೇಪಿಸುತ್ತಲೇ ಇರುತ್ತಾರೆ. ಅವರ ಜೀವನವು ದುರಂತವಾಗಿ ಮೊಟಕುಗೊಂಡಿರಬಹುದು, ಆದರೆ ಅವರ ಪರಂಪರೆ ಶಾಶ್ವತವಾಗಿ ಉಳಿಯುತ್ತದೆ.

ನಾನು ಭಾರತದ ಜನರ ಪರವಾಗಿ ಮತ್ತು ವೈಯುಕ್ತಿಕವಾಗಿ ಜಪಾನ್ ಜನರಿಗೆ, ವಿಶೇಷವಾಗಿ ಶ್ರೀಮತಿ ಅಕೀ ಅಬೆ ಮತ್ತು ಅವರ ಕುಟುಂಬಕ್ಕೆ ಹೃದಯಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಓಂ ಶಾಂತಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss