ಎನ್‌ಡಿಎ ಅಭ್ಯರ್ಥಿಗೆ ನನ್ನ ಸಂಪೂರ್ಣ ಸಹಕಾರ: ಸಂಸದೆ ಸುಮಲತಾ

ಹೊಸದಿಗಂತ ವರದಿ,ಮೈಸೂರು:

ಮಂಡ್ಯದಲ್ಲಿ ಸಂಸದೆಯಾಗಿರುವ ನಾನು ಎನ್‌ಡಿಎ ಅಭ್ಯರ್ಥಿಗೆ ನನ್ನ ಸ್ಥಾನ ಬಿಟ್ಟುಕೊಟ್ಟು ಮನಃಪೂರ್ವಕವಾಗಿ ಬಿಜೆಪಿ ಸೇರಿದ್ದೇನೆ. ಇದರ ಅರ್ಥ ಮೈತ್ರಿಕೂಟದ ಅಭ್ಯರ್ಥಿಗೆ ನನ್ನ ಸಂಪೂರ್ಣ ಸಹಕಾರ ಇದ್ದಂತೆ ಎಂದು ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಶನಿವಾರ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ೧೦ ವರ್ಷದಲ್ಲಿ ದೇಶದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು, ಅವರ ವ್ಯಕ್ತಿತ್ವವನ್ನು ಮೆಚ್ಚಿ ನಾನು ಕಳೆದ ವಾರ ಹಿಂದೆಯಷ್ಟೇ ಬಿಜೆಪಿಗೆ ಅಧಿಕೃತವಾಗಿ ಸೇರಿದ್ದೇನೆ. ಯಾರು ತಾವು ಗೆದ್ದಿರುವ ಸೀಟನ್ನು ಬಿಟ್ಟು ಕೊಡಲ್ಲ. ಆದರೆ ನಾನು ಬಿಟ್ಟು ಕೊಟ್ಟಿದ್ದೇನೆ. ನಾನು ಯಾವಾಗ ಬಿಜೆಪಿ ಪಕ್ಷ ಸೇರ್ಪಡೆಯಾದೆ, ಆವಾಗಲೇ ಎನ್‌ಡಿಎ ಅಭ್ಯರ್ಥಿ ಪರ ಇದ್ದೇನೆ ಎಂದರ್ಥ ಎಂದು ಹೇಳಿದರು.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ನನ್ನ ಮನೆಗೆ ಬಂದು, ಹಳೆಯದ್ದನ್ನೆಲ್ಲಾ ಮರೆಯೋಣ, ಸಹಕಾರ ನೀಡಿ ಎಂದು ಕೋರಿದರು. ನಾನು ಆಯ್ತು ಎಂದು ಹೇಳಿದ್ದೇನೆ. ಮಂಡ್ಯದಲ್ಲಿ ನನ್ನ ಬೆಂಬಲಿಗರು, ಕಾರ್ಯಕರ್ತರು ತಟಸ್ಥರಾಗಿಲ್ಲ, ಕೆಲಸ ಮಾಡುತ್ತಿದ್ದಾರೆ. ಪಕ್ಷ ಲೋಕಸಭೆ ಚುನಾವಣೆಯಲ್ಲಿ ನನಗೆ ಎಲ್ಲಿ ಪ್ರಚಾರ ಮಾಡಲು ಹೇಳುತ್ತದೆಯೋ ಅಲ್ಲಿಗೆ ಹೋಗಿ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸುತ್ತೇನೆ. ಕೆಲಸ ಮಾಡುತ್ತೇನೆ ಎಂದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚಿತ್ರ ನಟ ದರ್ಶನ್ ಪ್ರಚಾರ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ದರ್ಶನ್ ಯಾರಿಗೆ ಬೆಂಬಲ ನೀಡಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ. ಅವರಿಗೆ ಸಹಕಾರ ನೀಡಿದವರ, ಮನಸ್ಸಿಗೆ ಹತ್ತಿರವಾದರ ಪರವಾಗಿ ನಿಲ್ಲುತ್ತಾರೆ. ದರ್ಶನ್‌ಗೆ ಇಂತಹವರ ಪರ ಪ್ರಚಾರ ಮಾಡು, ಇಂತಹ ವ್ಯಕ್ತಿಗಳ ಪರವಾಗಿ ಪ್ರಚಾರ ಮಾಡಬೇಡ ಎಂದು ನಾನು ಹೇಳಲು ಆಗುವುದಿಲ್ಲ. ದರ್ಶನ್ ಸಣ್ಣ ಮಗುವಲ್ಲ. ಪ್ರಚಾರ ನಾನು ಅಭ್ಯರ್ಥಿಯಾಗಿದ್ದಾಗಲೂ ದರ್ಶನ್‌ಗೆ ಬಾ ಎಂದಿರಲಿಲ್ಲ. ಅವರೇ ಬಂದು ನನ್ನ ಪರವಾಗಿ ಪ್ರಚಾರ ಮಾಡಿದ್ದರು ಎಂದು ಹೇಳಿದರು. ಸುಮಮ್ಮ ಏನೇ ಕೆಲಸ ಹೇಳಿದರೂ ಮಾಡುತ್ತೇನೆ ಎಂದು ದರ್ಶನ್ ಹೇಳಿದ್ದರು. ಅದು ನನ್ನ ವಿಚಾರದಲ್ಲಿ ಮಾತ್ರವೇ ಹೊರತು ಬೇರೆಯವರ ವಿಚಾರದಲ್ಲಿ ಅಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ದರ್ಶನ್ ಅವರು ಮಂಡ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಅವರು ಯಾವ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

ಹತ್ಯೆಗೀಡಾದ ಯುವತಿಯ ಚಾರಿತ್ರ್ಯವನ್ನು ಹತ್ಯೆ ಮಾಡಲಾಗುತ್ತಿದೆ
ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ನೇಹಾ ಹಿರೇಮಠ ಹತ್ಯೆ ಮಾಡಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಫೋಟೋಗಳು ಹರಿದಾಡುತ್ತಿವೆ. ಅಲ್ಲಿ ಆಕೆಯ ಚಾರಿರಿತ್ರ್ಯವನ್ನು ಹತ್ಯೆ ಮಾಡುತ್ತಿರುವುದು ನೋವಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾರೊ ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನೇ ತಪ್ಪು ಎನ್ನುವುದು ಸರಿಯಲ್ಲ. ಆದರೆ, ಒಂದು ಸಮುದಾಯವನ್ನು ಮೆಚ್ಚಿಸಲು ಇಂತಹ ಕೃತ್ಯಗಳು ನಡೆದಾಗ ಅದನ್ನು ಸಮರ್ಥನೆ ಮಾಡಿಕೊಳ್ಳುವುದು ತಪ್ಪು. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾಗ ಎಫ್‌ಎಸ್‌ಎಲ್ ವರದಿ ಬರುವ ಮುನ್ನವೇ ಕೆಲವರು ಸಮರ್ಥನೆ ಮಾಡಿಕೊಂದ್ದರು. ಅದರಂತೆ ಈ ಪ್ರಕರಣದಲ್ಲೂ ನೇಹಾ ಕೊಲೆಯನ್ನು ವೈಯಕ್ತಿಕ ಕಾರಣಕ್ಕೆ ಆಗಿರುವುದು ಎಂದು ಹೇಳಲಾಗುತ್ತಿದೆ. ಇದು ಸರಿಯಲ್ಲ. ರಾಜ್ಯ ಸರ್ಕಾರ ಉಪೇಕ್ಷೆ ಮಾಡದೆ ಕೂಡಲೆ ಕ್ರಮ ತೆಗೆದುಕೊಳ್ಳಬೇಕು. ವೈಯಕ್ತಿಕ ಕಾರಣಕ್ಕೆ ಎಂದು ಎಲ್ಲರೂ, ಎಲ್ಲರನ್ನು ಹತ್ಯೆ ಮಾಡಲು ಸಾಧ್ಯವಿಲ್ಲ. ವೈಯಕ್ತಿಕ,ರಾಜಕೀಯ, ಸಮುದಾಯದ ಕೊಲೆ ಎಂದು ಕಾನೂನಿನಲ್ಲಿ ಇಲ್ಲ. ಘಟನೆಯಲ್ಲಿ ಧರ್ಮವನ್ನು ಎಳೆ ತರುವುದು ತಪ್ಪು. ಆದರೆ, ಒಂದು ಸಮುದಾಯವನ್ನು ಮೆಚ್ಚಿಸಲು ಘಟನೆಯನ್ನು ಸಮರ್ಥಿಸಿಕೊಳ್ಳುತ್ತಿರುವುದೂ ತಪ್ಪು. ಆರೋಪಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ನಗರ ವಕ್ತಾರ ಮೋಹನ್ ಕುಮಾರ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ವಸಂತ್, ಮಹಿಳಾ ಮೋರ್ಚಾದ ನಗರಾಧ್ಯಕ್ಷೆ ರೇಣುಕಾರಾಜ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!