ಸಿನಿಮಾದ ಕಥೆಗಳಿಗೆ ನನ್ನ ಊರು, ಯಕ್ಷಗಾನವೇ ಪ್ರೇರಣೆ: ರಿಷಬ್​​ ಶೆಟ್ಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ನನ್ನ ಸಿನಿಮಾದ ಕಥೆಗಳಿಗೆ ನನ್ನ ಊರು ಮತ್ತು ಯಕ್ಷಗಾನವೇ ಪ್ರೇರಣೆ ಎಂದು ಖ್ಯಾತ ನಟ,ನಿರ್ದೇಶಕ ರಿಷಬ್​​ ಶೆಟ್ಟಿ ಹೇಳಿದ್ದಾರೆ.

‘ಕುಂದಾಪ್ರ ಕನ್ನಡ ಪ್ರತಿಷ್ಠಾನ’ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಕುಂದಾಪುರ ಕನ್ನಡ ಹಬ್ಬ-2024’ರ ಮೊದಲ ದಿನವಾದ ಶನಿವಾರ ‘ಊರ ಗೌರವ’ ಸನ್ಮಾನ ಸ್ವೀಕರಿಸಿಮಾತನಾಡಿದ ಅವರು, ಎಲ್ಲಿಗೆ ಹೋದರೂ, ಏನೇ ಮಾಡಿದರೂ, ಎಲ್ಲಿಂದ ಬಂದಿದ್ದೇವೆ ಎನ್ನುವುದು ಮುಖ್ಯ. ಆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನನ್ನ ಸಿನಿಮಾದ ಎಲ್ಲ ಕಥೆಗಳಿಗೂ ಕುಂದಾಪುರದ ನನ್ನೂರು ಕೆರಾಡಿಯೇ ಕಾರಣ, ನಾನು ಬೆಳೆದ ಪರಿಸರವೇ ಪ್ರೇರಣೆ. ಅದರಲ್ಲೂ ಓದದೆಯೇ ರಾಮಾಯಣ-ಮಹಾಭಾರತದ ಸಾರ ತಿಳಿಯಲು ಯಕ್ಷಗಾನ ಕಾರಣ. ‘ಕಾಂತಾರ’ ಸಿನಿಮಾ ಚಿತ್ರೀಕರಣ ಕೂಡ ಕುಂದಾಪುರ ಪರಿಸರದಲ್ಲೇ ಆಗಿರುವುದು ಎಂದು ಹೇಳಿದ್ದಾರೆ.

ನಮ್ಮ ಭಾಷೆ ಸಂಸ್ಕೃತಿ ಮಕ್ಕಳಿಗೆ ಗೊತ್ತಾಗಬೇಕು. ಅದಕ್ಕಾಗಿ ಇಂಥ ಹಬ್ಬಗಳು ಅತ್ಯಗತ್ಯ. ತುಳಸಿ ಕಟ್ಟೆಗಳು ಅಪರೂಪ ಆಗಿರುವ ಈ ಕಾಲದಲ್ಲಿ ಇಲ್ಲಿ ತುಳಸಿ ಕಟ್ಟೆ ಇಟ್ಟು ಉದ್ಘಾಟನೆ ನಡೆಸಿರುವುದು ಉತ್ತಮ ಸಂಗತಿ. ನಾನು‌ ಕೂಡ ನನ್ನ ಪ್ರತಿ ಸಿನಿಮಾದಲ್ಲೂ ಅಕ್ಕಿಮುಡಿ, ನೆಟ್ಟಿ ಮುಂತಾದವನ್ನು ತೋರಿಸುತ್ತಿರುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದರು.

ರಿಷಬ್ ಶೆಟ್ಟಿ- ಪ್ರಗತಿ ಶೆಟ್ಟಿ ದಂಪತಿಗೆ ‘ಊರ ಗೌರವ’ದ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮವನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಸಂಗೀತ ನಿರ್ದೇಶಕ ರವಿ ಬಸ್ರೂರು, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾರಣಕಟ್ಟೆ ಎಂ.ಎಸ್. ಮಂಜ ಚಾರಿಟಬಲ್ ಟ್ರಸ್ಟ್‌ನ ಕೃಷ್ಣಮೂರ್ತಿ ಮಂಜ, ಲೈಫ್‌ಲೈನ್ ಫೀಡ್ಸ್ ಪ್ರೈ.ಲಿ. ಎಂಡಿ ಕಿಶೋರ್ ಕುಮಾರ್ ಹೆಗ್ಡೆ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ಡಾ.ದೀಪಕ್ ಶೆಟ್ಟಿ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ ಮುಂತಾದವರು ಉಪಸ್ಥಿತರಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!