ಹೊಸದಿಗಂತ ವರದಿ ಮಂಡ್ಯ:
ಆಜಾದಿ ಕಾ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನದಡಿ ಜಿಲ್ಲಾದ್ಯಂತ ಸಂಗ್ರಹಿಸಿದ ಮೃತ್ತಿಕೆ (ಮಣ್ಣು)ಯನ್ನು ಹೊತ್ತೊಯ್ದ ಬಿಜೆಪಿ ಕಾರ್ಯಕರ್ತರನ್ನು ನಗರದ ಬಿಜೆಪಿ ವಿಕಾಸ ಭವನದಲ್ಲಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ಇತರೆ ಕಾರ್ಯಕರ್ತರು ಬೀಳ್ಕೊಟ್ಟರು.
ಈ ವೇಳೆ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ಮಾತನಾಡಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಸ್ಮರಣಾರ್ಥಕವಾಗಿ ಸ್ಮಾರಕವನ್ನು ನಿರ್ಮಿಸುವ ಉದ್ದೇಶದಿಂದ ದೇಶಾದ್ಯಂತ ಮಣ್ಣು ಸಂಗ್ರಹಿಸಲಾಗಿದೆ ಎಂದು ಹೇಳಿದರು.
ದೇಶದ ರಕ್ಷಣೆಗಾಗಿ ತನು, ಮನ, ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ವೀರಯೋಧರ ಸ್ಮರಣಾರ್ಥಕವಾಗಿ ದೇಶದ ರಾಜಧಾನಿ ದೆಹಲಿಯಲ್ಲಿ ’ಅಮೃತವಾಟಿಕ ’ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಿಂದ ಮಣ್ಣನ್ನು ಕ್ರೂಢೀಕರಿಸಿ ಅಮೃತ ಕಳಶಗಳ ಮೂಲಕ ದೆಹಲಿಗೆ ರವಾನಿಸಲಾಗುತ್ತಿದೆ. ಇದು ದೇಶದ ಘನತೆಯ ಪ್ರತೀಕವಾಗಿದ್ದು, ಯೋಧರಿಗೆ ಸಲ್ಲಿಸುವ ಗೌರವ ನಮನವಾಗಿದೆ ಎಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಸಹ ಇಂದಿಗೂ ತಾರತಮ್ಯದ ಅಂಧಕಾರದಲ್ಲಿ ಮುಳುಗಿ ಮಾನವ ಸಮಾಜ ನಲುಗಿ ಹೋಗಿರುವುದು ದುರಂತದ ಸಂಗತಿಯಾಗಿದೆ .ಅದಕ್ಕಾಗಿ ನಾವೆಲ್ಲರೂ ಭಾರತೀಯರು ಎಂಬ ಪರಿಕಲ್ಪನೆಯ ಜಾಗೃತಿಯನ್ನು ಮೂಡಿಸಲು ವಸುದೈವ ಕುಟುಂಬಕಂ ಎಂಬ ಸಮಾನತೆಯ ಸಂದೇಶವನ್ನು ಸಾರಲು, ಕೇಂದ್ರ ಸರ್ಕಾರ ಹರ್‌ಘರ್ ತಿರಂಗ, ಆಜಾದಿಕ ಅಮೃತ ಮಹೋತ್ಸವ ಹಾಗೂ ’ನನ್ನ ಮಣ್ಣು ನನ್ನ ದೇಶ ’ಕಾರ್ಯಕ್ರಮಗಳು ಪ್ರತೀಕವಾಗಿವೆ ಎಂದು ವಿವರಿಸಿದರು.