ಮೈಲಾರ ಕಾರ್ಣಿಕೋತ್ಸವ ಜಾತ್ರೆ: ಈ ಬಾರಿಯೂ ಸಾರ್ವಜನಿಕರಿಗೆ ನಿರ್ಬಂಧ

ಹೊಸದಿಗಂತ ವರದಿ,ವಿಜಯನಗರ:

ಹೂವಿನಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವವು ಫೆ.8ರಿಂದ ಫೆ.19ರವರೆಗೆ ನಡೆಯಲಿದೆ.11 ದಿನಗಳ ಕಾಲ ನಡೆಯಲಿರುವ ಈ ಕಾರ್ಣಿಕೋತ್ಸವ ಜಾತ್ರಾ ಮಹೋತ್ಸವದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸಾರ್ವಜನಿಕರು,ಭಕ್ತಾದಿಗಳ ನಿರ್ಬಂಧ ವಿಧಿಸಲಾಗಿದೆ.
ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಅನಾರೋಗ್ಯದ ಹಿನ್ನೆಲೆ ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ದೇವಸ್ಥಾನದ ರೂಢಿ,ಸಂಪ್ರದಾಯದ ಪೂಜಾ ಕಾರ್ಯ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ಈ ವರ್ಷವೂ ಯಾವುದೇ ರೀತಿಯ ಆಡಚಣೆ ಇಲ್ಲದಂತೆ ಸುಸೂತ್ರವಾಗಿ ಜರುಗಲಿವೆ. ಕೋವಿಡ್ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಸಭೆಯಲ್ಲಿ ತಿಳಿಸಿದರು.
ಫೆ.8ರಿಂದ ಫೆ.19ರವರೆಗೆ ಮೈಲಾರ ಕ್ಷೇತ್ರದ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಜರುಗಲಿದ್ದು, ಫೆ.8ರಂದು ಕಂಕಣಧಾರಣೆ, ಫೆ.16ರಂದು ಹುಣ್ಣಿಮೆ,ಫೆ.18ರಂದು ಕಾರ್ಣಿಕೋತ್ಸವ ಮತ್ತು ಫೆ.19ರಂದು ಸರಪಳಿ ಪವಾಡ ಜರುಗಲಿವೆ ಎಂದು ತಿಳಿಸಿದ ಡಿಸಿ ಅನಿರುದ್ಧ ಶ್ರವಣ್ ಅವರು ಸಾರ್ವಜನಿಕರು ಮತ್ತು ಭಕ್ತಾದಿಗಳು 11 ದಿನಗಳ ಕಾಲ ಇತ್ತ ಬರದಂತೆ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಸಾರ್ವಜನಿಕರ ಪ್ರವೇಶ ನಿರ್ಬಂದಕ್ಕೆ ಅಗತ್ಯ ವ್ಯವಸ್ಥೆ ಕೈಗೊಳ್ಳಿ:
ಮೈಲಾರ ಗ್ರಾಮಕ್ಕೆ ಸಾರ್ವಜನಿಕರು/ಭಕ್ತಾದಿಗಳು ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಕುರುವತ್ತಿ,ಹ್ಯಾರಡ,ಹೊಳಲು,ಹಾವೇರಿ,ಹೊಳಕಡೆ,ಡೆಂಕನಮರಡಿಯ ಎಲ್ಲ ದಾರಿಗಳಿಗೆ ಸೂಕ್ತ ಬ್ಯಾರಿಕೆಡ್ ವ್ಯವಸ್ಥೆ ಮಾಡಿಕೊಂಡು ಪ್ರವೇಶ ನಿರ್ಬಂಧಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಡಿಸಿ ಅನಿರುದ್ಧ ಶ್ರವಣ್ ಅವರು ಸೂಚಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಫೆ.8ರಿಂದ ಫೆ.19ರವರೆಗೆ ಮೈಲಾರಕ್ಕೆ ಬರುವುದರಿಂದ ಹೊರಡಗೆಯಿಂದ ಬಂದಂತ ಭಕ್ತಾದಿಗಳು ಗ್ರಾಮಕ್ಕೆ ಪ್ರವೇಶ ಮಾಡದಂತೆ ಅಗತ್ಯ ಕ್ರಮಜರುಗಿಸಬೇಕು ಎಂದು ತಿಳಿಸಿದ ಅವರು ದರ್ಶನಕ್ಕೂ ಸಹ ನಿರ್ಬಂಧ ವಿಧಿಸಲಾಗುತ್ತಿದ್ದು,ಈ ಕುರಿತು ಪ್ರತ್ಯೇಕ ಆದೇಶವನ್ನು ಜಿಲ್ಲಾಡಳಿತದಿಂದ ಹೊರಡಿಸಲಾಗುವುದು ಎಂದರು.
ಜಾತ್ರಾಪ್ರದೇಶದಲ್ಲಿ ಯಾವುದೇ ವಾಣಿಜ್ಯ ವಹಿವಾಟು ನಡೆಸಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್, ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್,ಅಪರ ಜಿಲ್ಲಾಧಿಕಾರಿ ಮಹೇಶಬಾಬು, ಹರಪನಳ್ಳಿ ಸಹಾಯಕ ಆಯುಕ್ತರಾದ ಚಂದ್ರಶೇಖರಯ್ಯ, ಹಿಂದೂ ಧಾರ್ಮಿಕ ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶರಾವ್, ಹಡಗಲಿ ತಹಸೀಲ್ದಾರ್ ಮಹೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!