ಹೊಸದಿಗಂತ ವರದಿ,ವಿಜಯನಗರ:
ತೀವ್ರ ಕುತೂಹಲ ಕೆರಳಿಸಿದ್ದ ಹೊಸಪೇಟೆ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಶುಕ್ರವಾರ ನಡೆದಿದ್ದು, ಸುಂಕಮ್ಮ ಅಧ್ಯಕ್ಷೆ ಹಾಗೂ ಆನಂದ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಗೆಲುವಿನ ನಗೆ ಬೀರಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯದಿದ್ದರೂ ಪಕ್ಷೇತರ ಬೆಂಬಲದಿಂದ ಬಿಜೆಪಿ ಹೊಸಪೇಟೆ ನಗರಸಭೆಯನ್ನು ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಿರೀಕ್ಷೆಯಂತೆ ಸುಂಕಮ್ಮ ಅವರು ಅಧ್ಯಕ್ಷರಾಗುವುದು ಖಚಿತವಾಗಿತ್ತು, ಆದರೇ, ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿತ್ತು. 3ನೇ ವಾರ್ಡ್ ನ ಬಿ.ನಾರಾಯಣಪ್ಪ ಹಾಗೂ 15ನೇ ವಾರ್ಡ್ ನ ಎಲ್.ಎಸ್.ಆನಂದ್ ಅವರು ನಾಮಪತ್ರ ಸಲ್ಲಿಸಿದ್ದರು. ಆದರೇ, ಎಲ್.ಎಸ್.ಆನಂದ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.ಅಧ್ಯಕ್ಷೆ ಸ್ಥಾನಕ್ಕಾಗಿ 7ನೇ ವಾರ್ಡ್ ನ ಕಾಂಗ್ರೆಸ್ ಸದಸ್ಯೆ ನಾಮಪತ್ರ ಸಲ್ಲಿಸಲಿದ್ದಾರೆ ಎನ್ನುವ ಮಾತುಗಳು ಹರಿದಾಡಿದವು. ಪಕ್ಷೇತರ ಸದಸ್ಯರ ಬೆಂಬಲ ಬಿಜೆಪಿಗೆ ಹೆಚ್ಚು ಇರುವದನ್ನು ಗಮನಿಸಿದ ಅವರು ನಾಮಪತ್ರ ಸಲ್ಲಿಸಲು ಮುಂದಾಗಲಿಲ್ಲ, ಅಧ್ಯಕ್ಷರಾಗಿ ಸುಂಕಮ್ಮ ಅವರು ಅವಿರೋಧವಾಗಿ ಆಯ್ಕೆಯಾದರು. ವಿಜಯನಗರ ನೂತನ ಜಿಲ್ಲೆಯಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಹೊಸಪೇಟೆ ನಗರದ ಪ್ರಥಮ ಪ್ರಜೆಯಾಗಿ ಸುಂಕಮ್ಮ ಅವರು ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದರು.
ರಾಹುಕಾಲ ಅಡ್ಡಿ: ಶುಕ್ರವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಿಗಧಿಯಾಗಿತ್ತು. ಮ.12ರವರೆಗೆ ರಾಹುಕಾಲ ಇದ್ದ ಹಿನ್ನೆಲೆಯಲ್ಲಿ ಆಕಾಂಕ್ಷಿ ಯ್ಯಾವ ಅಭ್ಯರ್ಥಿಗಳು ಕಚೇರಿ ಕಡೆಗೆ ತಲೆ ಹಾಕಲಿಲ್ಲ, 1ಘಂಟೆಯೊಳಗೆ ಆಕಾಂಕ್ಷಿಗಳು ಕಚೇರಿಗೆ ಆಗಮಿಸಿ ಚುನಾವಣೆ ಪ್ರಕ್ರೀಯೆಯಲ್ಲಿ ಭಾಗವಹಿಸಿದರು. ಈ ವೇಳೆ ಸಂಸದ ವೈ.ದೇವೇಂದ್ರಪ್ಪ, ವಿಜಯನಗರ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪಕ್ಷದವರೇ ಅಧಿಕಾರಕ್ಕೆ: ಚುನಾವಣೆಯಲ್ಲಿ ಬಿಜೆಪಿ 10 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಸಿತ್ತು, ನಂತರ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ರಾಜಕೀಯ ಚದುರಂಗದಾಟದಿಂದ 9 ಪಕ್ಷೇತರ ಸದಸ್ಯರು ಬಿಜೆಪಿ ಸೇರ್ಪಡೆಯಾದರು, ನಂತರ ಆಮ್ ಆದ್ಮಿಪಕ್ಷದ ಒಬ್ಬ ಸದಸ್ಯರು ಕಮಲ ಪಾಳೆಯಕ್ಕೆ ಸೇರ್ಪಡೆಯಾದರು. ಪಕ್ಷೇತರರು ಹೆಚ್ಚು ಜನ ಬೆಂಬಲಿಸಿದ ಹಿನ್ನೆಲೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಪಕ್ಷೇತರ ಪಾಲಾಗಲಿದೆ ಎನ್ನುವ ಲೆಕ್ಕಾಚಾರವಿತ್ತು. ಆದರೇ, ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಸಿಂಗ್ ಈಸ್ ಈಸ್ ಕಿಂಗ್ ತಾವು ಅಂದುಕೊಂಡಂತೆ, ಎರಡೂ ಸ್ಥಾನಗಳನ್ನು ಬಿಜೆಪಿ ಸದಸ್ಯರಿಗೆ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾದರು.
ಹೊಸಪೇಟೆ ನಗರ ಮಾದರಿಯಾಗಲಿದೆ: ನೂತನ ಅಧ್ಯಕ್ಷರಾಗಿ ಸುಂಕಮ್ಮ ಆಯ್ಕೆಯಾದ ಸುದ್ದಿ ತಿಳಿಯುತ್ತಿದ್ದಂತೆ ಅವರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷೆ ಸುಂಕಮ್ಮ ಅವರು ಮಾತನಾಡಿ, ಅವಧಿಯಲ್ಲಿ ಹೊಸಪೇಟೆ ನಗರ ಅಭಿವೃದ್ಧಿಯಲ್ಲಿ ಮಾದರಿಯಾಗಲಿದೆ, ಎಲ್ಲ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು, ಬೆಂಬಲಿಸಿಸಿದ್ದು, ಮತದಾರರಿಗೆ ಹಾಗೂ ನೂತನ ಎಲ್ಲ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುವೆ, ಅಧಿಕಾರ ಯಾರಿಗೂ ಮುಖ್ಯವಲ್ಲ, ಅವಧಿಯಲ್ಲಿ ನಾವು ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ ಎನ್ನುವುದು ಮುಖ್ಯ, ನಗರದ ನಾಗರಿಕರ ನಿರೀಕ್ಷೆಯಂತೆ ಅವಧಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವೆ, ಇದು ಭರವಸೆಯಲ್ಲ, ನುಡಿದಂತೆ ನಡೆಯುವೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಸದಸ್ಯರು, ಪಕ್ಷದ ಪ್ರಮುಖರು, ನಗರಸಭೆ ಸಿಬ್ಬಂದಿಗಳು ಇತರರಿದ್ದರು. ನಂತರ ಸಚಿವರಾದ ಆನಂದ್ ಸಿಂಗ್ ಹಾಗೂ ಸಂಸದ ವೈ.ದೇವೇಂದ್ರಪ್ಪ ಸೇರಿ ಇತರೇ ಗಣ್ಯರು ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಿಗೆ ಅಭಿನಂದಿಸಿದರು.