Monday, October 2, 2023

Latest Posts

ಮೈಸೂರು ಅಪಘಾತ ದುರಂತ: ಸಂಗನಕಲ್ಲು ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ 9 ಜನರ ಮೃತದೇಹಗಳನ್ನು ಗ್ರಾಮದಲ್ಲಿ ಮಂಗಳವಾರ ಸಾಮೂಹಿಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ವಿಧಿವಿಧಾನಗಳ ಪ್ರಕಾರ ಒಂದೇ ಸಾಲಿನಲ್ಲಿ ಗುಂಡಿಗಳನ್ನು ಅಗೆದು, ಏಕಕಾಲದಲ್ಲಿ ಮೃತದೇಹಗಳನ್ನು ಮಣ್ಣು ಮಾಡಲಾಯಿತು.

ಕೆಲಹೊತ್ತು ಮನೆಯಂಗಳದಲ್ಲಿ ಸಾರ್ವಜನಿಕರ ದರುಶನಕ್ಕೆ ಇಡಲಾಯಿತು. ಬಳಿಕ ಆಂಬ್ಯುಲೆನ್ಸ್​​ಗಳಲ್ಲಿ ಮೃತದೇಹಗಳನ್ನು ಸಮೀಪದ ವೀರಶೈವ ರುದ್ರಭೂಮಿಗೆ ತಂದು ಸಾಮೂಹಿಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಭೀಕರ ಅಪಘಾತದಲ್ಲಿ ಸಂದೀಪ್ (24), ಅವರ ತಂದೆ ಕೊಟ್ರೇಶ್ (45), ತಾಯಿ ಸುಜಾತಾ (40) ಒಂದು ಕುಟುಂಬದವರಾಗಿದ್ದರೆ, ಇನ್ನೊಂದು ಕುಟುಂಬದ ಮಂಜುನಾಥ (35), ಪತ್ನಿ ಪೂರ್ಣಿಮಾ (30), ಮಕ್ಕಳಾದ ಕಾರ್ತಿಕ್ (08), ಪವನ್ (10) ಸಾವನ್ನಪ್ಪಿದ್ದರು. ಇನ್ನು ಮತ್ತೊಂದು ಕುಟುಂಬದ ಗಾಯತ್ರಿ (35), ಮಗಳು ಶ್ರಾವ್ಯ (3) ಮೃತಪಟ್ಟವರು. ಮೃತದೇಹಗಳನ್ನು ಮೈಸೂರಿನಿಂದ ನಾಲ್ಕು ಆಂಬ್ಯುಲೆನ್ಸ್​​​ಗಳಲ್ಲಿ ಕರೆ ತರಲಾಯಿತು.

ಸ್ಥಳಕ್ಕೆ ಮಾಜಿ ಸಚಿವ ಬಿ. ಶ್ರೀರಾಮುಲು, ಸಚಿವ ಬಿ ನಾಗೇಂದ್ರ ಅವರ ಸಹೋದರ ಬಿ. ವೆಂಕಟೇಶ್ ಪ್ರಸಾದ್, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಎಡಿಸಿ ಮೊಹಮ್ಮದ್ ಝುಬೇರಾ, ಡಿಹೆಚ್‌ಒ ಹೆಚ್​​ಎಲ್ ಜನಾರ್ದನ ಸೇರಿ ಹಲವರು ಸ್ಥಳದಲ್ಲೇ ಇದ್ದು, ಅಂತ್ಯಕ್ರಿಯೆ ನೆರವೇರಿಸಲು ಅನುವು ಮಾಡಿಕೊಟ್ಟರು. ರಾಜ್ಯ ಸರ್ಕಾರ ಮೃತ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ ಘೋಷಿಸಿದೆ. ಕೇಂದ್ರ ಸರ್ಕಾರವೂ ಕೂಡ ಎರಡು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!