ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಸ್ಕೃತಿಕ ನಗರಿ ಮೈಸೂರು ದಸರಾ ಹಬ್ಬದಲ್ಲಿ ಮಿಂದೇಳುತ್ತಿದೆ. ಪ್ರತಿದಿನ ವಿವಿಧ ರೀತಿಯ ಕಾರ್ಯಕ್ರಮಗಳು ವಿದೇಶಿ ಪ್ರವಾಸಿಗರು, ರಾಜ್ಯದ ಜನತೆಯನ್ನು ಆಕರ್ಷಿಸುತ್ತಿದ್ದು, ಇಂದು ಸಂಜೆ ಏರ್ ಶೋ ರಿಹರ್ಸಲ್ ನಡೆಯಲಿದೆ.
ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಎರಡು ದಿನಗಳ ಕಾಲ ಏರ್ ಶೋ ಆಯೋಜಿಸಲಾಗಿದ್ದು, ಇಂದು ಸಂಜೆ 4ಗಂಟೆಗೆ ಐಎಎಫ್‌ನ ಸೂರ್ಯಕಿರಣ್ ತಂಡದ ವೈಮಾನಿಕ ಪ್ರದರ್ಶನ ರಿಹರ್ಸಲ್ ಎಲ್ಲರನ್ನು ಆಕರ್ಷಿಸಲಿದೆ. ಇಂದಿನ ಏರ್ ಶೋ ವೀಕ್ಷಣೆಗೆ ಉಚಿತ ಅವಕಾಶವಿದ್ದು, ಯಾವುದೇ ಪಾಸ್ ಬೇಕಿಲ್ಲ. ಉಚಿತ ಎಂಟ್ರಿ ಇರಲಿದ್ದು, ಮಧ್ಯಾಹ್ನ ಮೂರು ಗಂಟೆ ಒಳಗೆ ಬಂದವರಿಗೆ ಮೈದಾನಕ್ಕೆ ಪ್ರವೇಶ ಸಿಗಲಿದೆ.
ಈ ಏರ್ ಶೋನಲ್ಲಿ ವಾಯು ಸೇನೆಯ ವಿವಿಧ ಯುದ್ಧ ವಿಮಾನಗಳು, ಲಘು ವಿಮಾನಗಳು ಭಾಗಿಯಾಗಲಿವೆ. ನಾಳೆ (ಅಕ್ಟೋಬರ್ 23) ರಂದು ನಡೆಯುವ ಪ್ರದರ್ಶನವು, ಪಾಸ್ ಇರುವವರಿಗೆ ಮಾತ್ರ ಮೈದಾನಕ್ಕೆ ಪ್ರವೇಶ ಅವಕಾಶವಿದೆ. ಇದಕ್ಕಾಗಿ ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಪಾಸ್ ಪಡೆದು ಏರ್ ಶೋ ವೀಕ್ಷಿಸಬಹುದು.