Saturday, April 1, 2023

Latest Posts

ಮೈಸೂರು ದಸರಾ ಹಬ್ಬ ಮುಗಿದ ಕೂಡಲೇ 2024ನೇ ಹಂಪಿ ಉತ್ಸವ ಆಚರಣೆ: ಆನಂದ್ ಸಿಂಗ್

 ಹೊಸ ದಿಗಂತ ವರದಿ, ಹಂಪಿ (ಗಾಯತ್ರಿ ಪೀಠ):

ಮೈಸೂರು ದಸರಾ ಹಬ್ಬದ ವೈಭವದ 9 ದಿನಗಳ ನವರಾತ್ರಿ ಹಬ್ಬ ಮುಗಿದ ಕೂಡಲೇ ವಿಶ್ವ ಪ್ರಸಿದ್ಧ ಹಂಪಿ ಉತ್ಸವ ಆಚರಿಸಬೇಕು ಎಂದು ತೀರ್ಮಾನ ತೆಗೆದುಕೊಂಡಿದ್ದೇವೆ, ಮುಂಬರುವ 2024ನೇ ಸಾಲಿನ ಹಂಪಿ ಉತ್ಸವವನ್ನು ಅತ್ಯಂತ ವೈಭವದೊಂದಿಗೆ ಆಚರಿಸುವೆ, ಮತ್ತೆ ನಮ್ಮ ಸರ್ಕಾರ ಬಂದೇ ಬರುತ್ತೇ, ನಮ್ಮ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೇ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಹೇಳಿದರು.

ವಿಶ್ವ ಪ್ರಸಿದ್ದ ಹಂಪಿ ಉತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಭಾನುವಾರ ಸಂಜೆ ಮಾತನಾಡಿದರು. ಪ್ರತಿ ವರ್ಷ ನ.3,4 ಹಾಗೂ 5 ರಂದು ಹಂಪಿ ಉತ್ಸವವನ್ನು ಆಚರಿಸಲು ತೀರ್ಮಾನಿಸಲಾಗಿತ್ತು. ಆದರೇ, ನಾನಾ ಕಾರಣಗಳಿಂದ ಬದಲಾವಣೆಯಾಗುತ್ತಿದೆ. ಈ ಕುರಿತು ಎಲ್ಲರೊಂದಿಗೆ ಚೆರ್ಚಿಸಿ, ಮೈಸೂರು ದಸರಾ ವೈಭದ 9 ದಿನಗಳ ನವರಾತ್ರಿ ಹಬ್ಬ ಮುಗಿದ ಬಳಿಕವೇ ಮೂರು ದಿನಗಳ ಕಾಲ ಉತ್ಸವವನ್ನು ಆಚರಿಸಲಾಗುವುದು. ಮತ್ತೇ ನಮ್ಮ ಸಿ.ಎಂ.ಬೊಮ್ಮಾಯಿ ಅವರೇ ಮುಂದಿನ ವರ್ಷದ ಉತ್ಸವಕ್ಕೆ ಚಾಲನೆ‌ ನೀಡಲಿದ್ದಾರೆ ಎಂದರು. ಉತ್ಸವಗಳು ನಡೆಯಬೇಕು, ಇದರಿಂದ ಮುಂದಿನ ಪೀಳಿಗೆಗೆ ಹಿಂದಿನ ಸಂಸ್ಕೃತಿ, ಪರಂಪರೆಯನ್ನು ತಿಳಿಸಿಕೊಟ್ಟಂತಾಗಲಿದೆ. ಈ ಹಂಪಿ ಉತ್ಸವದ ರೂವಾರಿ ದಿ.ಎಂ.ಪಿ.ಪ್ರಕಾಶ್ ಅವರನ್ನು ನೆನೆಯಲೇಬೇಕು, ಹಂಪಿಯ ಶ್ರೀ ಪುರುಂದರ ಮಂಟಪದಲ್ಲಿ ಸಣ್ಣ ಉತ್ಸವವನ್ನು ಆಚರಿಸುವ ಮೂಲಕ ಪ್ರಾರಂಭಿಸಿದರು. ಇಲ್ಲಿವರೆಗೂ ಮುಂದುವರೆದಿದೆ ಎಂದರು.

ವಿಜಯನಗರ ಅಂದ್ರನೇ ಒಂದು ರೋಮಾಂಚನ, ನೂತನ ಜಿಲ್ಲೆಯಾದ ಬಳಿಕ ಅದರ ಶಕ್ತಿನೇ ಬೇರೇಯಾಗಿದೆ. ಅದರ ಪ್ರಭಾವವೇ ಬೇರೇಯಾಗಿದೆ. ವಿಜಯನಗರ ಜಿಲ್ಲೆಗೆ ಒಳ್ಳೆಯ ಭವಿಷ್ಯವಿದೆ, ಇಲ್ಲಿನ ಸ್ಮಾರಕಗಳನ್ನು ರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಅವರು ಮಾತನಾಡಿ, ವಿಶ್ವಪ್ರಸಿದ್ಧ ಹಂಪಿ ಉತ್ಸವ ಕಳೆದ ಮೂರು ದಿನಗಳಿಂದ ಅದ್ದೂರಿಯಾಗಿ ನಡೆದಿದೆ. ಸ್ವಂತ ಅಣ್ಣನಂತೆ ನನಗೆ ಬೆನ್ನೆಲಬಾಗಿ ನಿಂತು ಉತ್ಸವದ ಯಶಸ್ವಿಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಶ್ರಮಿಸಿದ್ದಾರೆ, ಈ ಉತ್ಸವ ಜನೋತ್ಸವವಾಗಲು ಪ್ರತಿಯೊಬ್ಬರೂ ಶ್ರಮಿಸಿದ್ದಾರೆ, ಬರುವ ದಿನಗಳಲ್ಲಿ ಎಲ್ಲರೂ ಸೇರಿ ಮತ್ತೆ ಅದ್ದೂರಿಯಾಗಿ ಆಚರಿಸೋಣ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಕಮಲಾಪೂರ ಪ.ಪಂ.ಅಧ್ಯಕ್ಷ ಸೈಯದ್ ಅಮಾನುಲ್ಲಾ, ನಗರಸಭೆ ಸ್ಥಾಯಿ ಸಮೀತಿ ಅದ್ಯಕ್ಷ ತಾರಿಹಳ್ಳ ಜಂಬುನಾಥ್, ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ್, ಜಿಲ್ಲಾದಿಕಾರಿ ಟಿ.ವೆಂಕಟೇಶ, ಎಸ್ಪಿ ಶ್ರೀಹರಿಬಾಬು, ಜಿ.ಪಂ.ಸಿಇಒ ಹರ್ಷಲ್ ನಾರಾಯಣರಾವ್, ತಹಸೀಲ್ದಾರ್ ಮಹೆತಾ ಸೇರಿದಂತೆ ಇತರರಿದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ ಕಾರ್ಯಕ್ರಮ ನಿರ್ವಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!