Sunday, December 10, 2023

Latest Posts

ಮೈಸೂರು ದಸರಾ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ ಗೆ ಡಾ. ಪದ್ಮಾ ಆಯ್ಕೆ

ಹೊಸದಿಗಂತ ವರದಿ, ಮೈಸೂರು:

ಪ್ರತಿ ವರ್ಷ ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಅರಮನೆಯ ಮುಖ್ಯ ವೇದಿಕೆಯಲ್ಲಿ ದಸರಾ ಉದ್ಘಾಟನಾ ಸಮಾರಂಭದ ದಿನದಂದು ರಾಜ್ಯದ ಒಬ್ಬರು ಹಿರಿಯ ಸಂಗೀತ ಸಾಧಕರನ್ನು ಗುರುತಿಸಿ ಅವರಿಗೆ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ ಯನ್ನು ನೀಡಿ ರಾಜ್ಯ ಸರ್ಕಾರದಿಂದ ಗೌರವಿಸಲಾಗುತ್ತದೆ.

2023-24ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ ಗಾಗಿ ಪ್ರಸಿದ್ಧ ಕ್ಲಾರಿಯೋನೆಟ್ ವಾದಕರಾದ ಡಾ. ಪಂಡಿತ್ ನರಸಿಂಹಲು ವಡವಾಟಿ ರವರ ಅಧ್ಯಕ್ಷತೆಯ ಸಮಿತಿಯು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಡಾ. ಪದ್ಮಾ ಮೂರ್ತಿ ಅವರನ್ನು ಆಯ್ಕೆ ಮಾಡಿದೆ. ಸಮಿತಿಯ ಆಯ್ಕೆಯಂತೆ ಡಾ. ಪದ್ಮಾ ಮೂರ್ತಿ, ಬೆಂಗಳೂರು ಅವರನ್ನು 2023-24ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ ಗಾಗಿ ಸರ್ಕಾರವು ಆಯ್ಕೆ ಮಾಡಿ ಆದೇಶಿದೆ.

ಡಾ. ಪದ್ಮಾ ಮೂರ್ತಿ : ಡಾ. ಪದ್ಮಾ ಮೂರ್ತಿ ಅವರು ಜನಿಸಿದ್ದು 24.02.1932 ರಂದು ಈಗ ಅವರಿಗೆ 91 ವರ್ಷ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಡಾ. ಪದ್ಮಾ ಮೂರ್ತಿ ಅವರು ಮೈಸೂರು ವಾಸುದೇವಾಚಾರ್ಯ, ಟಿ. ಚೌಡಯ್ಯ, ಟಿ. ಪುಟ್ಟಸ್ವಾಮಯ್ಯನವರ ಬಳಿ ಸಂಗೀತಾಭ್ಯಾಸವನ್ನು ಎಚ್. ಎಸ್. ಕೃಷ್ಣಮೂರ್ತಿ, ಆರ್ . ಎಸ್. ಕೇಶವಮೂರ್ತಿಯವರ ಬಳಿ ವೀಣಾ ವಾದನವನ್ನು ಕಲಿತಿರುತ್ತಾರೆ. ಇವರು ಬಿ. ಎಸ್. ಸಿ., ಎಂ. ಎ., ಪಿ. ಹೆಚ್. ಡಿ., ಡಿ. ಲಿಟ್. ಪದವೀಧರರು. ಸಂಗೀತದಲ್ಲಿ ವಿದ್ವತ್, ಸೈಕಾಲಜಿ ಆಫ್ ಮ್ಯೂಸಿಕ್ ಎಂಬ ವಿಷಯಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪದವಿ ಅಕಾಶವಾಣಿಯ ಬಿ-ಹೈ ಕಲಾವಿದರು. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥರಾಗಿ ಹಾಗೂ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ತಜ್ಞರ ಸಮಿತಿ ಸದಸ್ಯರೂ ಆಗಿದ್ದರು. ರಾಜ್ಯ-ಹೊರರಾಜ್ಯ, ವಿದೇಶಗಳಲ್ಲಿ ಕಚೇರಿ ಪ್ರಾತ್ಯಕ್ಷಿಕೆ ನೀಡಿರುತ್ತಾರೆ. ಇವರು ಬರೆದಿರುವ ಕರ್ನಾಟಕ ಸಂಗೀತ ಲಕ್ಷಣ ಸಂಗ್ರಹ 2 ಸಂಪುಟಗಳಲ್ಲೂ, ವಾಗ್ಗೇಯಕಾರರುಗಳ ಬಗ್ಗೆಯೂ ಮತ್ತು ಇತರ ಹಲವು ಲೇಖನಗಳು ಪ್ರಕಟಣೆಗೊಂಡಿವೆ. ಇವರ ಕಾರ್ಯಕ್ರಮಗಳು ದೂರದರ್ಶನದಲ್ಲೂ ಪ್ರಸಾರವಾಗಿವೆ. ಕರ್ನಾಟಕ ಗಾನಕಲಾ ಪರಿಷತ್ತಿನ ತಜ್ಞರ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಂಗೀತ ನ್ಯತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ ಪ್ರಶ್ತಸ್ತಿ, ಮದರಾಸಿನ ಪಾರ್ಥಸಾರಥಿ ಸಂಗೀತ ಸಭಾದಿಂದ ವಿದ್ಯಾರತ್ನ, ಬೆಂಗಳೂರು ಗಾಯನ ಸಮಾಜದ ವರ್ಷದ ಕಲಾವಿದೆ ಮುಂತಾದ ಅನೇಕ ಸನ್ಮಾನಗಳು ಇವರಿಗೆ ಸಂದಿವೆ.

ದಿನಾಂಕ: 15.10.2023ರಂದು ಮೈಸೂರು ಅರಮನೆಯ ಮುಖ್ಯ ವೇದಿಕೆಯಲ್ಲಿ ನಾಡಹಬ್ಬ ದಸರಾದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸಂಗೀತ ವಿದುಶಿ ಡಾ. ಪದ್ಮಾ ಮೂರ್ತಿ ಅವರಿಗೆ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು “ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಿದ್ದಾರೆ. ಪ್ರಶಸ್ತಿಯು ರೂ. 5.00 ಲಕ್ಷಗಳ ನಗದು, ಸರಸ್ವತಿ ವಿಗ್ರಹದ ಸ್ಮರಣಿಕೆ, ಪ್ರಶಸ್ತಿ ಫಲಕ, ಶಾಲು, ಹಾರ, ಫಲತಾಂಬುಲಗಳನ್ನು ಒಳಗೊಂಡಿರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!