ಭಾರತದಲ್ಲಿ ಸೆಮಿಕಂಡಕ್ಟರ್ ನಿರ್ಮಾಣಕ್ಕೆ ಮೈಸೂರಿನಿಂದಲೇ ಚಾಲನೆ-ಡಾ. ಅಶ್ವತ್ಥನಾರಾಯಣ

ಹೊಸದಿಗಂತ ವರದಿ ಮಂಡ್ಯ:
ಭಾರತದಲ್ಲಿ ಸೆಮಿಕಂಡಕ್ಟರ್ ನಿರ್ಮಾಣದ ಆಶಯ ಬಿಜೆಪಿ ಸರ್ಕಾರಕ್ಕಿದ್ದು ಮೈಸೂರಿನಿಂದಲೇ ಅದಕ್ಕೆ ಚಾಲನೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ನಗರದ ಮಿಮ್ಸ್ ಸಭಾಂಗಣದಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ಭಾರತ ಸೆಮಿಕಂಡಕ್ಟರ್ ದೇಶ ಆಗಲು ಹೊರಟಿದೆ. ಅದೂ ಸಹ ಕರ್ನಾಟಕದ ಮೂಲಕವೇ ಆಗುತ್ತಿದೆ. ಎಲೆಕ್ಟ್ರಾನಿಕ್ ಡಿಸೈನ್‌ನಲ್ಲಿ ಇಡೀ ದೇಶದಲ್ಲೇ ನಾವು ಮೊದಲ ಸ್ಥಾನದಲ್ಲಿದ್ದೇವೆ. ವಿಶ್ವದಲ್ಲೇ ಭಾರತ ಎರಡನೇ ಸ್ಥಾನದಲ್ಲಿದೆ. ಅಷ್ಟರ ಮಟ್ಟಿಗೆ ಬಹಳಷ್ಟು ಮುಂದೆ ಇದ್ದೇವೆ. ನಮ್ಮ ಶಕ್ತಿ ಅದ್ಬುತವಾಗಿದೆ ಎಂದು ಹೇಳಿದರು.
ಗುರಿ ಮತ್ತು ಬದ್ಧತೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ಮಾಡಿದ್ದೇವೆ. ಗುಣಮಟ್ಟದ ಶಿಕ್ಷಣ ಪದವಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದೇವೆ. ಕೌಶಲ್ಯಾಧಾರಿತ ಶಿಕ್ಷಣದಲ್ಲೂ ಸಾಕಷ್ಟು ಮುಂಚೂಣಿಯಲ್ಲಿದ್ದು, ಹೊಸ ಹೊಸ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಮುಂದಡಿ ಇಟ್ಟಿದ್ದೇವೆ ಎಂದು ವಿವರಿಸಿದರು.
ಕೋವಿಡ್-19 ಸೇರಿದಂತೆ ಹಲವಾರು ಸಮಸ್ಯೆ ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸಿರುವುದು ಎಲ್ಲರಿಗೂ ತಿಳಿದಿದೆ. ಇದೆಲ್ಲವನ್ನೂ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿ ದೇಶದ ಜ್ವಲಂತ ಸಮಸ್ಯೆಗಳು ನಮ್ಮ ಕಣ್ಣ ಮುಂದೆಯೇ ಬಗೆಹರಿದಿವೆ. ನಮ್ಮ ಅವಧಿಯಲ್ಲೇ ಸಮಸ್ಯೆ ಬಗೆಹರಿಯುತ್ತವೆ ಎಂಬ ಕಲ್ಪನೆಯೂ ಇರಲಿಲ್ಲ. ಅಂತಹ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸುವ ಶಕ್ತಿ ಮತ್ತು ಬದ್ಧತೆಯನ್ನು ನಮ್ಮ ಸರ್ಕಾರ ಪ್ರದರ್ಶಿಸಿದೆ. ಸವಾಲನ್ನು ಸ್ವೀಕರಿಸಿ ಉತ್ತಮವಾದ ಆಡಳಿತ ನೀಡುವಲ್ಲಿ ಸಮರ್ಥವಾದ ಪಕ್ಷ ಎಂದರೆ ಅದು ಬಿಜೆಪಿ ಮಾತ್ರ ಎಂದು ಪ್ರತಿಪಾದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!