ಹೊಸದಿಗಂತ ವರದಿ ಮೈಸೂರು:
ದಸರಾ ಎಂದರೆ ಎಲ್ಲರಿಗೂ ಬಹಳ ಅಚ್ಚುಮೆಚ್ಚು. ಮೈಸೂರಿನ ಆಡಂಬರವನ್ನು ನೋಡಲು ಎರಡು ಕಣ್ಣು ಸಾಲದು. ಇಂತಹ ಅದ್ಬುತ ದೃಶ್ಯಗಳು ಪ್ರಪಂಚದಲ್ಲಿ ಎಲ್ಲೋಯೂ ನೋಡಲು ಸಿಗುವುದಿಲ್ಲ ಎಂದು ಚಿತ್ರ ನಟ ಶ್ರೀಮುರುಳಿ ಹೇಳಿದರು.
ಮಂಗಳವಾರ ರಾತ್ರಿ ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ, ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮುನ್ನುಡಿಯಾದ ಯುವ ಸಂಭ್ರಮ ಕಾರ್ಯಕ್ರಮವನ್ನು ಡೋಲು ಬಾರಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಮ್ಮ ನಾಡಹಬ್ಬವನ್ನು ತಲಾ ತಲಾತರಗಳಿಂದ ಬೆಳೆಸಿಕೊಂಡು ಬಂದು, ಇಂದಿಗೂ ಅದೇ ರೀತಿಯಲ್ಲಿ ಆಚರಿಸುತ್ತಿರುವುದು ಸಂತಸದ ಸಂಗತಿ. ನಾವು ಇದರಲ್ಲಿ ಪಾಲ್ಗೊಂಡಿರುವುದು ಹೆಚ್ಚಿನ ಖುಷಿ ನೀಡಿದೆ. ಕರ್ನಾಟಕದ ಹೆಮ್ಮೆಯಾಗಿರುವ ದಸರಾವನ್ನು ಎಲ್ಲರೂ ಸಂಭ್ರಮದಿಂದ ಆಚರಿಸಿ ಯಶಸ್ವಿಗೊಳಿಸೋಣ ಎಂದರು.
ಚಿತ್ರ ನಟಿ ರುಕ್ಮಿಣಿ ವಸಂತ್ ಮಾತನಾಡಿ, ವಿಶ್ವ ವಿಖ್ಯಾತ ನಾಡಹಬ್ಬದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಮೈಸೂರು ಜನತೆ ಯಾವಾಗಲು ನಮ್ಮ ಮೇಲೆ ಚಿತ್ರ ರಂಗದ ಮೇಲೆ ಇಟ್ಟಿರುವ ಪ್ರೀತಿಗೆ ಎಂದಿಗೂ ಚಿರಋಣಿ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ ಮಹಾದೇವಪ್ಪ ಮಾತನಾಡಿ, ಯುವಸಂಭ್ರಮದಲ್ಲಿ ಭಾಗವಹಿಸಬೇಕೆಂದು ರಾಜ್ಯದ 470 ಕಾಲೇಜುಗಳಿಂದ ಯುವ ಪ್ರತಿಭೆಗಳು ಅರ್ಜಿ ಸಲ್ಲಿಸಿದ್ದು, 150 ಕಾಲೇಜುಗಳು ಆಯ್ಕೆಯಾಗಿ 120 ಕಾಲೇಜುಗಳನ್ನು ಕೈ ಬಿಡಲಾಗಿತ್ತು. ಆದರೇ ಯಾವುದೇ ಪ್ರತಿಭೆಗಳಿಗೆ ಮೋಸವಾಗಬಾರದು ಎಂಬ ಕಾರಣದಿಂದ ಯುವ ಸಂಭ್ರಮವನ್ನು ಒಂದು ದಿನ ಹೆಚ್ಚು ಮಾಡಿ ಅವರಿಗೂ ಅವಕಾಶ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.