ದಿಗಂತ ವರದಿ ಮಡಿಕೇರಿ:
ವಿಕೆತ್ರಿ ಪಿಕ್ಚರ್ಸ್ ನಿರ್ಮಾಣದ, ಹಿರಿಯ ಸಾಹಿತಿ ನಾಗೇಶ್ ಕಾಲೂರು ಕಾದಂಬರಿ ಆಧಾರಿತ, ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ “ನಾಡ ಪೆದ ಆಶಾ” ಕೊಡವ ಚಲನಚಿತ್ರ 27 ನೇ ಕೊಲ್ಕೊತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ವಿಶ್ವದ ವಿವಿಧ ದೇಶಗಳ ಸಂಸ್ಕೃತಿ ಮತ್ತು ಆಚಾರ, ವಿಚಾರಗಳನ್ನು ಪ್ರತಿಬಿಂಬಿಸುವ ಚಲಚಿತ್ರಗಳ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡುತ್ತಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕರ್ನಾಟಕ ರಾಜ್ಯದಿಂದ ಕೊಡವ, ತುಳು ಮತ್ತು ಕೊಂಕಣಿ ಭಾಷೆಯ ಮೂರು ಚಿತ್ರಗಳಷ್ಟೇ ಆಯ್ಕೆಯಾಗಿವೆ. ಜ.7 ರಿಂದ 14 ರವರೆಗೆ ಚಲನಚಿತ್ರೋತ್ಸವ ನಡೆಯಲಿದ್ದು, ಜ.11 ರಂದು ರಬೀಂದ್ರ ಸದನ್ ಥಿಯೇಟರ್’ನಲ್ಲಿ “ನಾಡ ಪೆದ ಆಶಾ” ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ತಿಳಿಸಿದ್ದಾರೆ.
ಒಂದು ವಾರ ವಿಶ್ವದ ಸುಮಾರು 384 ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಕೊಡವ ಚಲಚಿತ್ರವೊಂದು ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರವೆಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ತಾವು ನಿರ್ದೇಶಿಸಿದ 12 ಚಿತ್ರಗಳಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವ ಐದನೇ ಚಿತ್ರ ಇದಾಗಿದೆ. ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ, ಪರಿಸರದ ಮೇಲೆ ಬೆಳಕು ಚೆಲ್ಲಿರುವ ಮತ್ತು ಸ್ವಾವಲಂಬಿ ಮಹಿಳೆಯೊಬ್ಬಳು ಸಮಾಜಮುಖಿಯಾಗಿ ಸೇವೆ ಸಲ್ಲಿಸುವ ಕಥಾಹಂದರದ “ನಾಡ ಪೆದ ಆಶಾ” ಚಿತ್ರಕ್ಕೆ ವಿಶೇಷ ಗೌರವ ಸಿಕ್ಕಿರುವುದು ಮತ್ತಷ್ಟು ಚಿತ್ರಗಳ ನಿರ್ದೇಶನಕ್ಕೆ ಸ್ಫೂರ್ತಿ ದೊರೆತಂತಾಗಿದೆ. ಎಲ್ಲಾ ಕಲಾವಿದರು, ತಂತ್ರಜ್ಞರು, ರಚನೆಕಾರರು ಸೇರಿದಂತೆ ಇಡೀ ಚಿತ್ರತಂಡ, ಚಿತ್ರೀಕರಣಕ್ಕೆ ಸ್ಥಳಾವಕಾಶ ನೀಡಿದವರು, ಪತ್ರಕರ್ತರು ಹಾಗೂ ಎಲ್ಲಾ ಚಿತ್ರಾಭಿಮಾನಿಗಳ ನೆರವಿನಿಂದ ಈ ಯಶಸ್ಸು ಸಾಧ್ಯವಾಗಿದೆ. ಜಿಲ್ಲೆ ಮತ್ತು ಹೊರ ಜಿಲ್ಲೆಯ ಕೊಡವ ಸಮಾಜಗಳ ಸಹಕಾರದಿಂದ “ನಾಡ ಪೆದ ಆಶಾ” ಯಶಸ್ವಿ 123 ಪ್ರದರ್ಶನಗಳನ್ನು ಕಂಡಿದೆ ಎಂದು ಪ್ರಕಾಶ್ ಕಾರ್ಯಪ್ಪ ತಿಳಿಸಿದರು.
ಇದು ಕೊಡವ ಚಲಚಿತ್ರವಾದರೂ ಎಲ್ಲಾ ಜಾತಿ, ಮತ, ಭಾಷೆಯವರು ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹ ನೀಡಿದ್ದಾರೆ. ಇದೇ ಮಾರ್ಚ್ ತಿಂಗಳಿನಲ್ಲಿ ತಾವು ರಚಿಸಿರುವ ಕಾದಂಬರಿಯಾಧಾರಿತ ಚಿತ್ರ “ವಿಧಿರಕಳಿ” ಸೆಟ್ಟೇರಲಿದೆ. ನಟ, ನಟಿಯರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಚಿತ್ರದಲ್ಲೂ ಕೊಡಗಿನ ಪರಿಸರ ಮತ್ತು ಸಂಸ್ಕೃತಿಯ ಅನಾವರಣಕ್ಕೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.
:ನಾಡ ಪೆದ ಆಶಾ :::
“ನಾಡ ಪೆದ ಆಶಾ” ಚಿತ್ರದ ನಿರ್ಮಾಪಕರಾಗಿ ಈರಮಂಡ ಹರಿಣಿ ವಿಜಯ್ ಹಾಗೂ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಕಾರ್ಯನಿರ್ವಹಿಸಿದ್ದಾರೆ.