ಹೊಸದಿಗಂತ ಡಿಜಿಟಲ್ ಡೆಸ್ಕ್:
‘ನಾಗರ ಪಂಚಮಿ’ಯಂದು ಭಕ್ತರು ದೇವಾಲಯ, ಹುತ್ತ, ನಾಘರ ಕಲ್ಲುಗಳಿಗ ಪೂಜೆ ಮಾಡೋದನ್ನು ನೋಡಿರುತ್ತೇವೆ. ಆದರೆ, ಒಬ್ಬ ವ್ಯಕ್ತಿ ನಿಜವಾದ ನಾಗರ ಹಾವನ್ನು ಮನೆಗೆ ತಂದು ಪೂಜಿಸಿರುವ ಘಟನೆ ರಾಜ್ಯದ ಉತ್ತರಕನ್ನಡದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಶಾಂತ್ ಹುಲೇಕಲ್ ಎಂಬುವವರು ಪ್ರತಿ ವರ್ಷ ನಾಗರ ಪಂಚಮಿಯಂದು ತಮ್ಮ ಕುಟುಂಬದ ಸದಸ್ಯರೊಂದಿಗೆ ಸೇರಿ ನಿಜ ನಾಗರಹಾವಿಗೆ ಪೂಜಿಸುತ್ತಾರೆ. ನಿಜವಾದ ಹಾವನ್ನು ಮನೆಗೆ ತಂದು ಪ್ರಶಾಂತ್ ಅವರ ಕುಟುಂಬ ಸದಸ್ಯರು ಈ ಬಾರಿ ಹಾವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸೋಮವಾರ ಪೂಜಾ ಕೋಣೆಗೆ ಚಿಕ್ಕ ಹಾವಿನ ಮರಿ ತಂದು ಮಾಲೆ ಹಾಕಿ, ಹಾವಿನ ಮರಿಗೆ ಹಾಲು ನೀಡಿ ಪೂಜೆ ಸಲ್ಲಿಸಲಾಯಿತು. ಪೂಜೆ ಮುಗಿದ ಬಳಿಕ ಮತ್ತೆ ಕಾಡಿಗೆ ಬಿಡಲಾಯಿತು.
ಪ್ರಶಾಂತ್ ಹುಲೇಕಲ್ ಹಾವುಗಳನ್ನು ಹಿಡಿಯುವ ಕೆಲಸ ಮಾಡುತ್ತಾರೆ. ಕಳೆದ 35 ವರ್ಷಗಳಿಂದ ಹಾವುಗಳನ್ನು ಹಿಡಿದು ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡುತ್ತಾರೆ. ಹಾವುಗಳ ಬಗ್ಗೆ ಮಾಹಿತಿಯನ್ನೂ ವಿದ್ಯಾರ್ಥಿಗಳಿಗೆ ವಿವರಿಸುತ್ತಾರೆ. ಹಾವುಗಳನ್ನು ಪ್ರೀತಿಸಿ, ಹಾವುಗಳನ್ನು ರಕ್ಷಿಸಿ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಲು ಈ ರೀತಿ ನಾಗಪಂಚಮಿ ಆಚರಿಸಲಾಗುತ್ತದೆ ಎಂದು ಪ್ರಶಾಂತ್ ತಿಳಿಸಿದರು.