ಕಸ ಸಂಗ್ರಹಣೆಯಲ್ಲಿ ಮಾದರಿಯಾದ ನಗರಂಗೆರೆ ಗ್ರಾಮ ಪಂಚಾಯಿತಿ!!

ಹೊಸದಿಗಂತ ವರದಿ ಚಿತ್ರದುರ್ಗ:

ಹೆಚ್ಚಿನ ಜನಸಂಖ್ಯೆ ಹಾಗೂ ವಾಣಿಜ್ಯ ವಹಿವಾಟಿನಿಂದಾಗಿ ಚಳ್ಳಕೆರೆ ನಗರಕ್ಕೆ ಹೊಂದಿಕೊಂಡಿರುವ ನಗರಂಗೆರೆ ಗ್ರಾಮ ಪಂಚಾಯಿತಿ ಜನರಿಗೆ ಕಸವಿಲೇವಾರಿಯು ಅತ್ಯಂತ ದೊಡ್ಡ ಸಮಸ್ಯೆಯಾಗಿತ್ತು. ಇಂತಹ ಸಮಸ್ಯೆಗೆ ಆಶಾಕಿರಣವಾಗಿ ಕಂಡುಬಂದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರಾಯೋಜಿತ ಯೋಜನೆಯೇ ’ಸ್ವಚ್ಛ ಭಾರತ್ ಮಿಷನ್’.

ಶ್ರೀ ಅನ್ನಪೂರ್ಣ ಮಹಿಳಾ ಸ್ವಸಹಾಯ ಸಂಘದೊಂದಿಗೆ ಒಪ್ಪಂದ:

’ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಶುಚಿತ್ವ ನೈರ್ಮಲೀಕರಣಕ್ಕೆ ಸಂಬಂಧಿಸಿದಂತೆ ಅನುದಾನವನ್ನು ಗ್ರಾ.ಪಂ.ಗೆ ಬಿಡುಗಡೆ ಮಾಡಲಾಯಿತು. ಅನುದಾನದಲ್ಲಿ ಇಲಾಖಾ ಮಾರ್ಗಸೂಚಿಗಳನ್ವಯ ಕಸ ಸಂಗ್ರಹಣೆಗಾಗಿ ಆಟೋ ಟಿಪ್ಪರ್ ಖರೀದಿಸಲಾಯಿತು. ಇಲಾಖಾ ಸೂಚನೆಯಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿನ ಎಲ್ಲಾ ಮಹಿಳಾ ಸ್ವಸಹಾಯ ಸಂಘಗಳ ಸಭೆ ಕರೆದು ಕಸ ಸಂಗ್ರಹಣೆ, ಕಸ ವಿಂಗಡಣೆ, ಕಸ ಸಂಗ್ರಹ ಶುಲ್ಕ ಸಂಗ್ರಹದ ಜವಾಬ್ದಾರಿಯನ್ನು ಗ್ರಾ.ಪಂ. ಸಾಮಾನ್ಯ ಸಭೆಯ ನಿರ್ಣಯದಂತೆ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಲಾಯಿತು.

ಕಸ ವಿಲೇವಾರಿಯ ಬಗ್ಗೆ ಸೂಕ್ತ ತರಬೇತಿ:

ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ವೈಜ್ಞಾನಿಕವಾಗಿ ಕಸ ಸಂಗ್ರಹಣೆ, ಕಸವಿಂಗಡಣೆ ಹಾಗೂ ಕಸವಿಲೇವಾರಿಯ ಬಗ್ಗೆ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕು, ಬಿಳಿಗೇರಿ ಗ್ರಾ.ಪಂ.ಗೆ ಕ್ಷೇತ್ರ ಅಧ್ಯಯನ ಪ್ರವಾಸ ಆಯೋಜಿಸಲಾಯಿತು. ಹಾಗೂ ಜಿ.ಪಂ., ತಾ.ಪಂ. ಮತ್ತು ಗ್ರಾ.ಪಂ.ಗಳ ಸಹಯೋಗದೊಂದಿಗೆ ಸೂಕ್ತ ತರಬೇತಿ ನೀಡಲಾಯಿತು.

ಅಧಿಕಾರಿಗಳ ಸಹಯೋಗದೊಂದಿಗೆ ಕಾರ್ಯಗತ:

ಗ್ರಾ.ಪಂ. ಸ್ವಂತ ನಿಧಿಯಿಂದ ಕಸ ಸಂಗ್ರಹಣೆ ವಾಹನ ಇಂಧನ ಹಾಗೂ ನಿರ್ವಹಣಾ ವೆಚ್ಚವನ್ನು ಭರಿಸಿ ಗ್ರಾ.ಪಂ.ಯ ಎಲ್ಲಾ ಗ್ರಾಮಗಳಿಂದ ಒಣಕಸ ಸಂಗ್ರಹಿಸಿ ಸಂಗ್ರಹಿಸಿದ ಕಸವನ್ನು ಸಮುದಾಯಭವನ (ಕಟ್ಟಡ ಕೊರತೆಯಿರುವ ಪ್ರಯುಕ್ತ) ದಲ್ಲಿ ವಿಂಗಡಣೆ ಮಾಡಲು ಹಾಗೂ ಕಸ ವಿಂಗಡನೆಯ ಸಂದರ್ಭದಲ್ಲಿ ಬಳಸಬೇಕಾದ ರಕ್ಷಣಾ ಸಾಮಾಗ್ರಿಗಳನ್ನು 14/15 ನೇ ಹಣಕಾಸು ಯೋಜನೆಯಡಿ ಖರೀದಿಸಲು ಸಾಮಾನ್ಯ ಸಭೆಯ ಮೂಲಕ ತೀರ್ಮಾನಿಸಿ ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯಗತಗೊಳಿಸಲಾಯಿತು.

ಹಸಿ, ಒಣಕಸ ವಿಂಗಡಣೆಯ ಬಗ್ಗೆ ಅರಿವು :

ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು, ಮುಖ್ಯ ಯೋಜನಾಧಿಕಾರಿಗಳು, ಕಾರ್ಯನಿರ್ವಾಹಣಾಧಿಕಾರಿಗಳು, ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳು, ಮಹಿಳಾ ಸ್ವಸಹಾಯ ಸಂಘಗಳು, ಗ್ರಾಮಸ್ಥರ ಹಾಗೂ ಗ್ರಾ.ಪಂ. ಸಿಬ್ಬಂದಿಗಳ ಸಹಯೋಗದೊಂದಿಗೆ ಗ್ರಾಮವಾರು ಮನೆಗಳಿಗೆ ಭೇಟಿ ನೀಡಿ ಹಸಿಕಸ, ಒಣಕಸ ವಿಂಗಡಣೆಯ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಲಾಯಿತು. ಕರಪತ್ರ ಹಂಚಿಕೆ ಹಾಗೂ ಬೀದಿನಾಟಕಗಳನ್ನು ಏರ್ಪಡಿಸುವುದರ ಮೂಲಕ ವೈಯುಕ್ತಿಕ ಹಾಗೂ ಅಮುದಾಯ ಶುಚಿತ್ವದ ಬಗ್ಗೆ ಸುಮಾರು ಒಂದು ತಿಂಗಳ ಕಾಲ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಕಸದ ಬುಟ್ಟಿಗಳ ವಿತರಣೆ :

ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳು, ಮುಖ್ಯ ಯೋಜನಾಧಿಕಾರಿಗಳು, ಜಿಲ್ಲಾ ಪಂಚಾಯತಿ ಚಿತ್ರದುರ್ಗ ಇವರ ಸಮ್ಮುಖದಲ್ಲಿ 2020 ರ ಅಕ್ಟೋಬರ್-2 ರಂದು ಸ್ವಚ್ಚ ಸಂಕೀರ್ಣ ಘಟಕದ ಉದ್ಘಾಟನೆ ಹಾಗೂ ಉಚಿತ ಕಸದ ಬುಟ್ಟಿ ವಿತರಣಾ ಕಾರ್ಯಕ್ರಮವನ್ನು ಮಾಡಲಾಯಿತು.

ಶುಲ್ಕ ಸಂಗ್ರಹಣೆ :

ಪ್ರಾರಂಭದಲ್ಲಿ ಒಂದು ತಿಂಗಳ ಕಾಲ ಉಚಿತ ಕಸ ಸಂಗ್ರಹಣೆಯನ್ನು ಮಾಡಲಾಯಿತು. ಸದರಿ ವೇತನವನ್ನು ಗ್ರಾಮ ಪಂಚಾಯತಿಯ ಸ್ವಂತ ನಿಧಿಯಿಂದಲೇ ಭರಿಸಲಾಯಿತು. ನಂತರ ಪ್ರತಿ ಮನೆಗೆ 30 ರೂ., ಅಂಗಡಿಗೆ 50 ರೂ., ಹೋಟೆಲ್ 100 ರೂ.ಗಳಂತೆ ಕಸ ಸಂಗ್ರಹಣಾ ಶುಲ್ಕವನ್ನು ಮಾಡಲು ಗ್ರಾ.ಪಂ. ಸಾಮಾನ್ಯ ಸಭೆಯು ನಿರ್ಣಯ ಕೈಗೊಂಡಿತು.

ಪ್ರಾರಂಭದಲ್ಲಿ ಕಸ ಸಂಗ್ರಹಣಾ ಶುಲ್ಕ ಸಂಗ್ರಹಿಸುವುದು ಕಷ್ಟ ಸಾಧ್ಯವಾಯಿತು. ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳು, ಮಹಿಳಾ ಸ್ವ-ಸಹಾಯ ಸಂಘಗಳು, ಗ್ರಾ.ಪಂ.ಯ ಸಿಬ್ಬಂದಿಗಳ ನೆರವಿನೊಂದಿಗೆ ಈಗ ತಿಂಗಳಿಗೆ 15,000 ರೂ. ಸಂಗ್ರಹಿಲಾಗುತ್ತಿದೆ. ಆ ಹಣವನ್ನು ಕಸ ಸಂಗ್ರಹಣೆ ಹಾಗೂ ವಿಂಗಡಣೆ ಮಾಡುತ್ತಿರುವ ಮಹಿಳಾ ಸ್ವಸಹಾಯ ಸಂಘದವರಿಗೆ ನೀಡಲಾಗುತ್ತಿದೆ.

ಸ್ವಚ್ಛತೆಯೆಡೆಗೆ ಒಂದು ಹೆಜ್ಜೆ:

ವೇಳಾಪಟ್ಟಿಯಂತೆ ಕಸದ ವಾಹನ ಗ್ರಾಮಗಳಿಗೆ ತೆರಳಿ ಕಸ ಸಂಗ್ರಹ ಮಾಡಿ ಕಸಸಂಗ್ರಹಣೆಯ ತಾತ್ಕಾಲಿ ಶೆಡ್‌ನಲ್ಲಿ ವಿಂಗಡಣೆ ಮಾಡಲಾಗುತ್ತಿದೆ. ಈಗ 15ನೇ ಹಣಕಾಸು ಯೋಜನೆಯಲ್ಲಿನ ಅನುದಾನವನ್ನು ಬಳಸಿಕೊಂಡ ಕಸ ವಿಂಗಡಣಾ ಕಸದ ಸಂಗ್ರಹ ಗುಂಡಿಗಳನ್ನು ನಿರ್ಮಿಸಲಾಗಿದೆ. ಈ ಎಲ್ಲಾ ಚಟುವಟಿಕೆಗಳನ್ನು ಅತ್ಯಂತ ಪೂರ್ವಯೋಚಿತವಾಗಿ ಅನುಷ್ಟಾನಗೊಳಿಸಿರುವ ಪ್ರಯುಕ್ತ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಕಡಿಮೆಯಾಗಿದ್ದು, ಸ್ವಚ್ಛತೆಯೆಡೆಗೆ ಒಂದು ಹೆಜ್ಜೆ ಇಟ್ಟಾಂತಾಗಿದೆ ಎನ್ನುತ್ತಾರೆ ನಗರಂಗೆರೆ ಗ್ರಾ.ಪಂ. ಪಿಡಿಒ ಎಂ.ರಾಮಚಂದ್ರಪ್ಪ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!