ಬ್ರಿಟೀಷ್‌ ಸೈನಿಕನಾಗಿ ಸಿಂಗಾಪುರಕ್ಕೆ ಹೋದ ನಂದನ್ ಸಿಂಗ್ ಅಲ್ಲಿ ʼಆಜಾದ್ ಹಿಂದ್ ಫೌಜ್‌ʼ ಸೇರಿ ಬ್ರಿಟೀಷರ ವಿರುದ್ಧವೇ ತಿರುಗಿಬಿದ್ದ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಂದನ್ ಸಿಂಗ್ ಅವರು ಉತ್ತರಾಖಂಡ್‌ ನ ಪೌರಿ ಜಿಲ್ಲೆಯ ಮಲ್ಲ ಬಾದಲ್ಪುರ್ ಪ್ರದೇಶದ ಕೋಟಾ ಮಲ್ಲ ಗ್ರಾಮದಲ್ಲಿ ಜನಿಸಿದರು. ನಂದನ್‌ ವಿದ್ಯಾಭ್ಯಾಸದ ಬಳಿಕ ಬ್ರಿಟೀಷ್‌ ಭಾರತದ ಸೇನೆಯನ್ನು ಸೇರಿದರು. ಭಾರತೀಯ ಸೇನೆಯ ರಾಯಲ್ ಗರ್ವಾಲ್ ರೈಫಲ್‌ನ ಆರ್ಮಿ ಮೆಡಿಕಲ್ ಕಾರ್ಪ್ಸ್‌ ವಿಭಾಗಕ್ಕೆ ಅವರನ್ನು ನೇಮಿಸಲಾಯಿತು. ಎರಡನೆಯ ಮಹಾಯುದ್ಧದದ ಸಂದರ್ಭದಲ್ಲಿ ಆಗ್ನೇಯ ಏಷ್ಯಾದ ದೇಶಗಳ ಮೇಲೆ ಜಪಾನ್ ಉಗ್ರ ದಾಳಿ ನಡೆಸಿದಾಗ ಅಲ್ಲಿದ್ದ ಭಾರತೀಯ ಸೈನಿಕರಿಗೆ ಸಹಾಯ ಮಾಡಲು ಮಲೇಶಿಯಾ ಮತ್ತು ಸಿಂಗಾಪುರಕ್ಕೆ ಕಳುಹಿಸಲಾಯಿತು. ಅಲ್ಲಿಂದ ನಂದನ್‌ ಸಿಂಗ್‌ ಜೀವನ ವಿಚಿತ್ರ ತಿರುವು ಪಡೆಯಿತು.
ಯುದ್ಧದ ಸಮಯದಲ್ಲಿ ಹಲವಾರು ಭಾರತೀಯ ಸೈನಿಕರು ಜಪಾನಿನ ಸೇನೆಯಿಂದ ಸೆರೆಯಾಳಾಗಿದ್ದರು. ಅವರಲ್ಲಿ ನಂದನ್ ಸಿಂಗ್ ಕೂಡ ಒಬ್ಬರಾಗಿದ್ದರು. ಯುದ್ಧ ಖೈದಿಯಾಗಿ ಸೆರೆಸಿಕ್ಕಿದ್ದ ಆತ ಜಪಾನಿ ಸೈನಿಕರ ವಶದಲ್ಲಿದ್ದ. ಆ ವೇಳೆಗೆ ಸಿಂಗಾಪುರದಲ್ಲಿ ಭಾರತದಲ್ಲಿ ದೊಡ್ಡಮಟ್ಟದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ತಯಾರಿ ನಡೆಸಿದ್ದರು. ಅಲ್ಲಿದ್ದ ವೇಳೆ ಬ್ರಿಟೀಷ್‌ ಸೈನಿಕ ನಂದನ್‌ ಗೆ ಭಾರತ ಸ್ವಾತಂತ್ರ್ಯದ ಮಹತ್ವ, ಭಾರತೀಯರನ್ನು ಬಳಸಿಕೊಂಡು ಭಾರತೀಯರನ್ನೇ ಹಣಿಯುವ ಬ್ರಿಟೀಷರ ಕುಠಿಲ ತಂತ್ರಗಳು ಮನದಟ್ಟಾದವು. ಅಲ್ಲಿಂದಾಚೆಗೆ ನೇತಾಜಿಯವರ ಅನುಯಾಯಿಯಾಗಿ ಸ್ಫೂರ್ತಿಯೊಂದಿಗೆ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಂದನ್‌ ಧುಮುಕಿದರು. ಅಲ್ಲಿದ್ದ ವೇಳೆ ಆಜಾದ್ ಹಿಂದ್ ಫೌಜ್‌ಗೆ ಸೇರಿದರು. ಬ್ರಟೀಷ್‌ ಸೈನಿಕನಾಗಿ ಅಲ್ಲಿಗೆ ಹೋಗಿದ್ದ ನಂದನ್‌ ವಾಪಸ್ಸಾಗುವಾಗ ಬ್ರಿಟೀಷರ ಕಟ್ಟ ವೈರಿಯಾಗಿ ಬದಲಾಗಿದ್ದ.
ಆತ ಯುದ್ಧ ಕಣದಲ್ಲಿ ವೀರ ಸೇನಾನಿಯಾಗಿದ್ದ ಜೊತೆಗೆ ಸಹ ಸೈನಿಕರ ಪಾಲಿನ ಆಪದ್ಬಾಂದವನೂ ಆಗಿದ್ದ. ಅಜಾದ್ ಹಿಂದ್ ಸೈನ್ಯದಲ್ಲಿ ಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ನೀಡುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತ್ತು. ಅವರನ್ನು ಆಜಾದ್ ಹಿಂದ್ ಫೌಜ್‌ ಸೈನ್ಯದ ಗುಂಪಿನಲ್ಲಿ ನರ್ಸಿಂಗ್ ಲ್ಯಾನ್ಸ್ ನಾಯಕ್ ಆಗಿ ನೇಮಿಸಲಾಯಿತು. ದ್ವಿತೀಯ ಮಹಾ ಯುದ್ಧದಲ್ಲಿ ಜಪಾನ್ ಶರಣಾದ ನಂತರ, ಅವರನ್ನು ಬ್ರಿಟಿಷ್ ಸೈನಿಕರು ಸೆರೆಹಿಡಿದರು. ಆಜಾದ್ ಹಿಂದ್ ಫೌಜ್‌ನ ಸೈನಿಕರನ್ನು ವಿಚಾರಣೆ ನಡೆಸಿ ಜೈಲು ಶಿಕ್ಷೆ ವಿಧಿಸಲಾಯಿತು.
ಈ ಯುದ್ಧ ಕೈದಿಗಳನ್ನು ಸ್ವಾತಂತ್ರ್ಯದ ನಂತರ ಬಿಡುಗಡೆ ಮಾಡಲಾಯಿತು. ಆ ಬಳಿಕ ಅವರು ರಾಜಸ್ಥಾನ ಸಶಸ್ತ್ರ ಕಾನ್ಸ್ಟಾಬ್ಯುಲರಿಯಲ್ಲಿ ಸೇವೆ ಸಲ್ಲಿಸಿದರು. 1973 ರಲ್ಲಿ ಪಾರ್ಶ್ವವಾಯುವಿಗೆ ಒಳಗಾದ ನಂದನ್ ಸ್ವಲ್ಪ ಸಮಯದ  ನಂತರ ನಿಧನರಾದರು. 1975 ರಲ್ಲಿ, ಅವರಿಗರ ಮರಣೋತ್ತರವಾಗಿ ʼಸ್ವಾತಂತ್ರ್ಯ ಹೋರಾಟಗಾರʼ ಎಂದು ಗುರುತಿಸಿ ಗೌರವಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!