ಹೊಸದಿಗಂತ ಡಿಜಿಟಲ್ ಡೆಸ್ಕ್:
ಔಷಧಿ ಕೊರತೆಯಿಂದಾಗಿ ಮಹಾರಾಷ್ಟ್ರ ಸರ್ಕಾರಿ ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ನಾಂದೇಡ್‌ನ ಡಾ.ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ 24 ರಿಂದ 35 ಕ್ಕೆ ಏರಿದೆ. ಮೃತರಲ್ಲಿ 16 ಶಿಶುಗಳು ಮತ್ತು 19 ವಯಸ್ಕರು ಸೇರಿದ್ದಾರೆ. ನಾಂದೇಡ್ ಘಟನೆಯ ಬಗ್ಗೆ ಸರ್ಕಾರ ತನಿಖೆ ನಡೆಸಲಿದ್ದು, ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭರವಸೆ ನೀಡಿದ್ದಾರೆ.
ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರಿಫ್ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಮತ್ತು ಆಡಳಿತ ಸಿಬ್ಬಂದಿಯೊಂದಿಗೆ ಸಭೆ ನಡೆಸಿದರು. ಬಳಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯೇ ಸಾವಿಗೆ ಕಾರಣ ಎಂದು ಸಚಿವರು ಒಪ್ಪಿಕೊಂಡರು. ನಿಯಮಿತ ನೇಮಕಾತಿ ಪ್ರಕ್ರಿಯೆಯ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವವರೆಗೆ ಕೊರತೆಯನ್ನು ನೀಗಿಸಲು ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಕ ಮಾಡಲು ಸರಕಾರ ಮುಂದಾಗಿದೆ. ಮತ್ತೊಂದೆಡೆ, ಶಂಭಾಜಿ ನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 14 ಜನರು ಸಾವನ್ನಪ್ಪಿದ್ದಾರೆ.
ಆಸ್ಪತ್ರೆಗಳಲ್ಲಿ ಸಾವಿನ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ: ಕೇಂದ್ರ ಸಚಿವ
ಎರಡು ಆಸ್ಪತ್ರೆಗಳಲ್ಲಿ ಸಾವಿನ ಬಗ್ಗೆ ವರದಿ ನೀಡುವಂತೆ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪವಾರ್ ಕೇಳಿದ್ದಾರೆ. ‘‘ಸರಕಾರಿ ಆಸ್ಪತ್ರೆಗಳಲ್ಲಿ ಸಾವುಗಳು ಸಂಭವಿಸುತ್ತಿರುವುದು ದುರದೃಷ್ಟಕರ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ವಿವರಣೆ ಕೇಳಿದ್ದೇವೆ. ನಾಂದೇಡ್ ಆಸ್ಪತ್ರೆಯಲ್ಲಿ ಸ್ಥಿತಿ ಚಿಂತಾಜನಕವಾಗಿದೆ. ಸಮಗ್ರ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ’’ ಎಂದು ಸಚಿವ ಭಾರತಿ ಪವಾರ್ ಹೇಳಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ವೈದ್ಯರ ನೇಮಕ
“ಇದು ತುರ್ತು ಪರಿಸ್ಥಿತಿ. ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಿಸುವುದಲ್ಲದೆ, ಬೇರೆ ಆಸ್ಪತ್ರೆಗಳ ವೈದ್ಯರನ್ನು ನಿಯೋಜಿಸಲು, ಖಾಸಗಿ ವೈದ್ಯರ ಸಹಾಯಕ್ಕೆ ಪ್ರಯತ್ನಿಸುತ್ತಿರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಮುಶ್ರೀಫ್ ಹೇಳಿದರು. ಶುಶ್ರೂಷಕರ ನೇಮಕಾತಿಯನ್ನು ಕೂಡಲೇ ಆರಂಭಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಶಿವಸೇನೆಯ ಶಿಂಧೆ ಪಾಳಯದ ಹಿಂಗೋಲಿ ಸಂಸದ ಹೇಮಂತ್ ಪಾಟೀಲ್ ನಾಂದೇಡ್ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಅನೈರ್ಮಲ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯ ಹಂಗಾಮಿ ಡೀನ್ ಡಾ.ಎಸ್.ಆರ್.ವಾಕೋಡ್ ಅವರಿಗೆ ಶೌಚಾಲಯ ಸ್ವಚ್ಛಗೊಳಿಸುವಂತೆ ಸಂಸದರು ಒತ್ತಾಯಿಸಿದರು. ಈ ಘಟನೆ ವೈದ್ಯರಲ್ಲಿ ಸಂಚಲನ ಮೂಡಿಸಿದೆ. ಸಂಸದರ ಕ್ರಮವನ್ನು ಮಹಾರಾಷ್ಟ್ರ ರಾಜ್ಯ ನಿವಾಸಿ ವೈದ್ಯರ ಸಂಘ ಖಂಡಿಸಿದೆ.