ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ ಒಂದು ಕ್ರಾಂತಿಕಾರಿ ಹೆಜ್ಜೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇದರಿಂದ ಹಾಲು ಉತ್ಪಾದಿಸುವ ರೈತರಿಗೆ ಹೆಚ್ಚಿನ ಆರ್ಥಿಕ ನೆರವು ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕಿನ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.

ಸಹಕಾರಿ ರಂಗದ ಹಾಲು ಉತ್ಪಾದಕರ ಶಕ್ತಿ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಸುಮಾರು 20 ಸಾವಿರ ಕೋಟಿಯಷ್ಟು ವ್ಯವಹಾರವನ್ನು ವಿವಿಧ ಬ್ಯಾಂಕುಗಳಲ್ಲಿ ಹಾಲು ಉತ್ಪಾದಕ ಸಂಘದವರು ಮಾಡುತ್ತಾರೆ. ಪ್ರತಿ ದಿನ ನಗದು ವ್ಯವಹಾರವಾಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆಗೆ ಅವರದ್ದೇ ಆದ ಬ್ಯಾಂಕ್ ಸ್ಥಾಪನೆಯಾಗಿ ಅವರಿಗೆ ಹೆಚ್ಚಿನ ಆರ್ಥಿಕ ನೆರವು ನೀಡಿ ಎಲ್ಲಾ ರೀತಿಯ ಸಹಾಯ ಮಾಡುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದರು.

ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗಣಕೀಕರಣ ಕಾರ್ಯ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಕರ್ನಾಟಕದಲ್ಲಿ 5775 ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಒಂದೇ ವರ್ಷದಲ್ಲಿ ಮಾಡುವಂತಹ ಕಾರ್ಯಕ್ರಮ ರೂಪಿಸಲಾಗಿದೆ. ಕೇಂದ್ರ ಸರಕಾರದಿಂದ ಶೇ. 60ರಷ್ಟು ಹಾಗೂ ರಾಜ್ಯ ಸರಕಾರ ಮತ್ತು ಸಹಕಾರಿ ಸಂಸ್ಥೆಗಳು ಶೇ. 40ರಷ್ಟು ಹೂಡಿಕೆ ಮಾಡಿ ಮೂರು ವರ್ಷಗಳಲ್ಲಿ ಮಾಡುವುದನ್ನು ಒಂದೇ ವರ್ಷದಲ್ಲಿ ಸಾಧಿಸಲಾಗುವುದು ಎಂದರು.

ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಹಾಲು ಒಕ್ಕೂಟ
ಕರ್ನಾಟಕದಲ್ಲಿ 1905 ರಿಂದ ಪ್ರಾರಂಭವಾಗಿ 100 ವರ್ಷಗಳಿಗೂ ಹೆಚ್ಚು ಕಾಲ ಗ್ರಾಮೀಣ ಬದುಕಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಯಾವುದೇ ಸರಕಾರಗಳಿಲ್ಲದಾಗಲೂ ಸಹಕಾರ ಇತ್ತು. ಸಹಕಾರ ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ ಆ ಸಂದರ್ಭದಲ್ಲಿ ನೆರವಾಗಿದೆ. ಸಹಕಾರದ ಮುಖಾಂತರ ಏನೆಲ್ಲಾ ಮಾಡಲು ಸಾಧ್ಯವಿದೆ ಎಂಬುದನ್ನು ಕರ್ನಾಟಕ ಹಾಲು ಒಕ್ಕೂಟ ನಿರೂಪಿಸಿದೆ. ಹಾಲು ಒಕ್ಕೂಟ ಉತ್ತಮವಾದ ಸಂಸ್ಥೆಯಾಗಿದ್ದು, ಹಲವಾರು ರೈತರಿಗೆ ಕೃಷಿಯನ್ನು ಹೊರತುಪಡಿಸಿ ಉದ್ಯೋಗವನ್ನು ನೀಡಿ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದೆ. ಅವರವರ ವ್ಯಾಪ್ತಿಯಲ್ಲಿ ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕುಗಳು ಉತ್ತಮವಾಗಿ ಕೆಲಸ ಮಾಡಿ ಈ ವರ್ಷ 33 ಲಕ್ಷ ಜನರಿಗೆ ಬಡ್ಡಿ ರಹಿತ ಸಾಲವನ್ನು ನೀಡುವ ಸಾಮರ್ಥ್ಯ ಸಹಕಾರಿ ರಂಗಕ್ಕೆ ಬಂದಿದೆ. ಸರಕಾರ ಸಹಕಾರಿ ರಂಗ ಮತ್ತು ಸಹಕಾರ ಇಲಾಖೆಯ ಜೊತೆಗಿದೆ ಎಂದರು.

ಯಶಸ್ವಿನಿ ಯೋಜನೆ ಪುನಃ ಪ್ರಾರಂಭ
ಗ್ರಾಮೀಣ ಪ್ರದೇಶದ ರೈತ ಕುಟುಂಬಗಳಿಗೆ ಉತ್ತಮ ಹಾಗೂ ಸರಳ ಆರೋಗ್ಯ ವ್ಯವಸ್ತೆ ನೀಡುವ ‘ಯಶಸ್ವಿನಿ’ ಯೋಜನೆ ಪುನಃ ಪ್ರಾರಂಭಿಸಿ 300 ಕೋಟಿಗಳನ್ನು ಆಯವ್ಯಯದಲ್ಲಿ ಮೀಸಲಿಡಲಾಗಿದೆ. 33 ಲಕ್ಷ ರೈತರಿಗೆ ₹ 24 ಸಾವಿರ ಕೋಟಿ ಕೃಷಿ ಸಾಲವನ್ನು ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯಿಂದ ರೈತರ ಸಹಕಾರಿ ಬ್ಯಾಂಕ್‍ಗಳು ಕಾರ್ಯನಿರ್ವಹಿಸಬೇಕು. ಸರಕಾರ ರೈತರನ್ನು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಶಕ್ತಿಯುತಗೊಳಿಸುವ ಗುರಿ ಹೊಂದಿದೆ ಎಂದು ಸಿಎಂ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!