spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ನಂದಿನಿ ಹಾಲಿನ ದರ ಹೆಚ್ಚಳ ಕುರಿತು ಸಿಎಂ ಜೊತೆ ಚರ್ಚಿಸುವೆ: ಬಾಲಚಂದ್ರ ಜಾರಕಿಹೊಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ನಂದಿನಿ ಉತ್ಪನ್ನಗಳ ಮಾರಾಟವನ್ನು ದೇಶಾದ್ಯಂತ ವಿಸ್ತರಿಸಲು ಬೆಳಗಾವಿಯಲ್ಲಿ ನಂದಿನಿ ಮೇಗಾ ಫುಡ್ ಪಾರ್ಕನ್ನು ಆರಂಭಿಸುವ ಕಾರ್ಯ ಪ್ರಗತಿಯಲ್ಲಿದೆ. ಪನ್ನೀರ್ ಹಾಗೂ ಚೀಜ್ ಆಧಾರಿದ ಉತ್ಪನ್ನಗಳು ಮತ್ತು ಇತರೇ ನಂದಿನಿ ಸಿಹಿ ಉತ್ಪನ್ನಗಳನ್ನು ಈ ಘಟಕದ ಮೂಲಕ ಉತ್ಪಾದಿಸಿ ಮಾರುಕಟ್ಟೆ ಜಾಲವನ್ನು ವಿಸ್ತರಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಕೆಎಂಎಫ್ 2020-21ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮೇಗಾ ಪುಡ್ ಪಾರ್ಕ್ ಮೂಲಕ ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ನಮ್ಮ ನಂದಿನಿ ಉತ್ಪನ್ನಗಳ ಮಾರಾಟವು ವಿಸ್ತರಣೆಯಾಗಲಿದೆ ಎಂದರು.

ಹಾಸನ ಜಿಲ್ಲಾ ಸಹಕಾರ ಹಾಲು ಒಕ್ಕೂಟದಿಂದ ನೂತನ ಪೆಟ್ ಬಾಟಲ್ ಘಟಕವನ್ನು ಅಳವಡಿಸಿದ್ದು, ಈ ಸ್ಥಾವರ ವಿವಿಧ ಮಾದರಿಯ ಸುಹಾಸಿತ ಹಾಲು, ಲಸ್ಸಿ, ಯೋಗರ್ಟ್ ಇತ್ಯಾದಿಯಾಗಿ ಸುಮಾರು 15 ಹೊಸ ಉತ್ಪನ್ನಗಳ ಉತ್ಪಾದನೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಘಟಕದಲ್ಲಿ ಪ್ರತಿನಿತ್ಯ 5 ಲಕ್ಷ ಪೆಟ್ ಬಾಟಲ್ ಉತ್ಪಾದನೆಯಾಗುತ್ತಿದ್ದು, ಇದನ್ನು ದೇಶ ವ್ಯಾಪ್ತಿಯಲ್ಲಿ ಮಾರಾಟ ಮಾಡಿ ನಂದಿನಿ ಉತ್ಪನ್ನಗಳ ಮಾರುಕಟ್ಟೆಯನ್ನು ಸಹ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹಾಲಿನ ದರ ಹೆಚ್ಚಳಕ್ಕೆ ಮನವಿ:
ದೇಶದ ಇತರೇ ರಾಜ್ಯಗಳಿಗೆ ಹೋಲಿಸಿದರೆ ನಂದಿನಿ ಹಾಲಿನ ದರವು ರಾಜ್ಯದಲ್ಲಿ ಅತೀ ಕಡಿಮೆ ದರವನ್ನು ಹೊಂದಿದೆ. ₹ 37 ಕ್ಕೆ ಪ್ರತಿ ಲೀಟರ್ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿರುವ ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಲಿನ ದರದಲ್ಲಿ ಪ್ರತಿ ಲೀಟರ್‌ಗೆ ₹ 3 ಏರಿಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಪ್ರತಿ ಲೀಟರ್ ಹಾಲಿಗೆ ₹ 40 ದರವನ್ನು ನಿಗದಿಪಡಿಸಿದಂತಾಗುತ್ತದೆ. ದರ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು. ಒಂದು ವೇಳೆ ₹ 37 ರಿಂದ ₹ 40 ಆದರೆ, ಅದರಲ್ಲಿ ರೈತರಿಗೆ ₹ 3 ನೀಡಲಾಗುವುದು ಎಂದವರು ಹೇಳಿದರು.

ನಂದಿನಿ ಉತ್ಪನ್ನಗಳನ್ನು ಹೊರ ರಾಜ್ಯಗಳಾದ ಹೈದರಾಬಾದ್, ಪುಣೆ, ಮುಂಬೈ, ಆಂಧ್ರ, ಗೋವಾ, ಚೆನ್ನೈ ಹಾಗೂ ವಿದೇಶಗಳಲ್ಲಿ ಈಗಾಗಲೇ ಪರಿಚಯಿಸಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊರ ರಾಜ್ಯಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ವಿಸ್ತರಿಸಲು ವಿಷನ್ 2025-26 ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

₹ 1017 ಕೋಟಿ ವಹಿವಾಟು ನಿರೀಕ್ಷೆ:
2021-22ನೇ ಸಾಲಿನಲ್ಲಿ ಕೆಎಂಎಫ್‌ನ 5 ಪಶು ಆಹಾರ ಘಟಕಗಳಿಂದ ಒಟ್ಟು 7.28 ಲಕ್ಷ ಮೆಟ್ರಿಕ್ ಟನ್ ಪಶು ಆಹಾರ ಉತ್ಪಾದಿಸಿ ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿದೆ. ಒಟ್ಟಾರೆ ಅಂದಾಜು ₹ 1017 ಕೋಟಿಗಳ ವಹಿವಾಟು ನಿರೀಕ್ಷಿಸಲಾಗಿದೆ. ಮಾರುಕಟ್ಟೆ ವಿಸ್ತರಣೆಯಲ್ಲಿ ಹಳ್ಳಿಯಿಂದ ಮಹಾನಗರದವರೆಗೆ ಎಂಬ ತತ್ವದಡಿ ನಂದಿನಿ ಹಾಲು, ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಿದೆ. ಇದರ ಮಾರಾಟವನ್ನು ಆಯಾ ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಸಮಗ್ರ ಮಾರುಕಟ್ಟೆ ಅಭಿವೃದ್ಧಿ ಯೋಜನೆಯನ್ನು 2022-26ರವರೆಗೆ ಜಾರಿಗೊಳಿಸಲು ರೂಪಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಭೀಮಾ ನಾಯಕ್, ನಂಜೇಗೌಡ, ಕೆಎಂಎಫ್ ನಿರ್ದೇಶಕರಾದ ಎಚ್.ಜಿ. ಹಿರೇಗೌಡರ, ಕಾಪು ದಿವಾಕರ ಶೆಟ್ಟಿ, ಮಾರುತಿ ಕಾಶೆಂಪೂರ, ಶ್ರೀಶೈಲಗೌಡ ಪಾಟೀಲ, ಕೆ.ಎಚ್. ಕುಮಾರ, ಆನಂದ ಕುಮಾರ, ಆರ್. ಶ್ರೀನಿವಾಸ, ಎಂ.ನಂಜುಂಡಸ್ವಾಮಿ, ವೀರಭದ್ರಬಾಬು, ವಿ.ಎಂ. ವಿಶ್ವನಾಥ, ಎಂ.ಕೆ. ಪ್ರಕಾಶ, ರಾಜ್ಯದ 14 ಹಾಲು ಒಕ್ಕೂಟಗಳ ಅಧ್ಯಕ್ಷರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap