ನಾರಾಯಣ ಗುರು ಚಿಂತನೆಗಳು ಎಲ್ಲೆಡೆ ಪಸರಿಸಲಿ: ಕೆ.ಜಿ.ಬೋಪಯ್ಯ

ಹೊಸ ದಿಗಂತ ವರದಿ, ಮಡಿಕೇರಿ:

ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ ಬ್ರಹ್ಮಶ್ರೀ ನಾರಾಯಣ ಗುರು ಅವರ ಆದರ್ಶ ಮತ್ತು ಚಿಂತನೆಗಳನ್ನು ತಿಳಿದುಕೊಂಡು, ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವಂತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಕೊಡಗು ಯೂನಿಯನ್ ವತಿಯಿಂದ ಸಿದ್ದಾಪುರದ ನಾರಾಯಣ ಗುರು ಸಭಾಂಗಣದಲ್ಲಿ ಶನಿವಾರ ನಡೆದ 168 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತವು ಅನೇಕ ಆಚಾರ-ವಿಚಾರ, ಸಂಸ್ಕೃತಿ ಮತ್ತು ಭಾಷೆ ಹೊಂದಿದೆ. ಆ ನಿಟ್ಟಿನಲ್ಲಿ ಭಾರತೀಯರೆಲ್ಲರೂ ಒಂದು ಎಂಬುದನ್ನು ಸಾರಿದ ಮಹಾನ್ ಮಾನವತಾವಾದಿ ನಾರಾಯಣ ಗುರು ಎಂದು ಶಾಸಕರು ನುಡಿದರು.
ಒಂದೇ ಕುಲ, ಒಂದೇ ಜಾತಿ ಎಂಬುದನ್ನು ನಾರಾಯಣ ಗುರು ಅವರು ಸಾರಿದ್ದಾರೆ. ನಾರಾಯಣ ಗುರು ಅವರು ಸಮಾಜಕ್ಕೆ ನೀಡಿರುವ ಸಂದೇಶಗಳು ಸಾರ್ವಕಾಲಿಕವಾಗಿದ್ದು, ಅವರು ಮನುಕುಲಕ್ಕೆ ಆದರ್ಶವಾಗಿದ್ದಾರೆ ಎಂದು ಕೆ.ಜಿ.ಬೋಪಯ್ಯ ಅವರು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ನಾರಾಯಣ ಗುರು ಅವರು ತತ್ವ ಸಂದೇಶಗಳನ್ನು ಮತ್ತಷ್ಟು ಪಸರಿಸುವಲ್ಲಿ ಇನ್ನಷ್ಟು ಪ್ರಯತ್ನಗಳು ನಡೆಯಲಿ ಎಂದು ಶಾಸಕರು ತಿಳಿಸಿದರು.
ಶಾಸಕ ಎಂ.ಪಿ.ಅಪ್ಪಚ್ಚು ರಂಜನ್  ಮಾತನಾಡಿ, ನಾರಾಯಣ ಗುರು ಅವರು ಮನುಕುಲದ ಕೆಡಕುಗಳನ್ನು ತೊಡೆದು ಹಾಕಲು ಪ್ರಯತ್ನಿಸಿದರು ಎಂದು ತಿಳಿಸಿದರು.
ಬಳಕೆಯಾಗದ ಅನುದಾನ: ಸೋಮವಾರಪೇಟೆ ತಾಲ್ಲೂಕಿನಲ್ಲಿ ಮಳೆಯಾಳಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಕಾಯ್ದಿರಿಸಿರುವ ಅನುದಾನವನ್ನು ಇನ್ನೂ ಬಳಸಿಕೊಂಡಿಲ್ಲ. ಶಾಸಕರ ಅನುದಾನದಿಂದ ಇನ್ನಷ್ಟು ಹೆಚ್ಚಿನ ಅನುದಾನ ನೀಡಿ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ ಮಲೆಯಾಳ ಮಾತನಾಡುವ ಭಾಷಿಕರ ಸಂಖ್ಯೆ ಹೆಚ್ಚಿದೆ. ಆ ನಿಟ್ಟಿನಲ್ಲಿ ನಾರಾಯಣ ಗುರು ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದರು.
ರಾಮನಗರ ಜಿಲ್ಲೆಯ ಸೋಲೂರು ಗ್ರಾಮದ ಆರ್ಯ ಈಡಿಗ ಮಹಾ ಸಂಸ್ಥಾನದ ಶ್ರೀ ರೇಣುಕಾ ಪೀಠ, ಶ್ರೀ ನಾರಾಯಣ ಗುರು ಮಠದ ವಿಖ್ಯಾತಾನಂದ ಸ್ವಾಮೀಜಿ ಅವರು ಆರ್ಶೀವಚನ ನೀಡಿದರು.
ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಸಿದ್ದಾಪುರದ ಕೊಡಗು ಯೂನಿಯನ್ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಅಧ್ಯಕ್ಷರಾದ ವಿ.ಕೆ ಲೋಕೇಶ್, ಮಾಜಿ ಅಡ್ವಕೇಟ್ ಜನರಲ್ ಎ.ಎಸ್.ಪೊನ್ನಣ್ಣ   ಮಾತನಾಡಿದರು.
ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ತುಳಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಕೊಡಗು ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷ ರಘು ಆನಂದ್, ಹಿಂದೂ ಮಲೆಯಾಳಿ ಸಮಾಜದ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಎಂ.ವಿಜಯ, ನಾರಾಯಣ ಗುರು ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷ ಆರ್.ಗಿರೀಶ್, ಕಾರ್ಯದರ್ಶಿ ರೀಶಾ ಸುರೇಂದ್ರ, ಇತರರು ಇದ್ದರು.
ಪ್ರತಿಭಾವಂತರಿಗೆ ಸನ್ಮಾನ: ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತೀ ಹೆಚ್ಚು ಪಡೆದ ವಿದ್ಯಾರ್ಥಿಗಳನ್ನು, ನಾರಾಯಣ ಗುರು ಅವರ ಕುರಿತು ಪುಸ್ತಕ ಬರೆದಿರುವ ಸಾಹಿತಿ ಡಾ.ಜೆ.ಸೋಮಣ್ಣ, ಸುನಿತಾ ಲೋಕೇಶ್, ರಾಣಿ ಅರುಣ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಸಿದ್ದಾಪುರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿಯಿಂದ ಮೆರೆವಣಿಗೆಗೆ ಪ್ರವೀಣ್ ಅವರು ಚಾಲನೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!