Sunday, December 3, 2023

Latest Posts

ನರೇಂದ್ರ ಮೋದಿ ಸರ್ಕಾರ ರೈತರನ್ನು ಸಶಕ್ತಗೊಳಿಸಿದೆ: ನಳಿನ್‍ಕುಮಾರ್ ಕಟೀಲ್ ಶ್ಲಾಘನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬೆಂಗಳೂರು:
ಆರು ದಶಕಗಳ ಕಾಲ ದೇಶದ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ರೈತರ ಪರ ನಿಂತಿರಲಿಲ್ಲ. ರೈತರ ಬೆನ್ನೆಲುಬನ್ನು ಗಟ್ಟಿ ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತುಮಕೂರಿನಲ್ಲಿ ಭಾನುವಾರ ನಡೆದ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಅಭಿಪ್ರಾಯಪಟ್ಟರು.
ಸಾವಯವ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ಪ್ರಗತಿಪರ ರೈತ ತುಮಕೂರು ತಾಲ್ಲೂಕಿನ ಮಸಣಾಪುರದ ಜಯಣ್ಣರನ್ನು ಅಭಿನಂದಿಸಿ ನಳಿನ್‍ಕುಮಾರ್ ಕಟೀಲ್ ಮಾತನಾಡಿದರು. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗೆ ಪ್ರತಿವರ್ಷ 6 ಸಾವಿರ ರೂಪಾಯಿಯನ್ನು ಹಾಕುವ ಕೆಲಸವನ್ನು ಬಿಜೆಪಿ ಸರಕಾರ ಮಾಡಿದೆ. ಪ್ರಧಾನಮಂತ್ರಿ ಮೋದಿ ಸರ್ಕಾರ ಫಸಲ್ ವಿಮಾ ಯೋಜನೆ ತರುವ ಮೂಲಕ ರೈತರಿಗೆ ಕೃಷಿ ಭದ್ರತೆಯನ್ನು ಒದಗಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಬಲ್ ಎಂಜಿನ್ ಬಿಜೆಪಿ ಸರಕಾರಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ರೈತಪರವಾಗಿ ಹೋರಾಟ ಮಾಡುತ್ತ ಬಂದಿದ್ದ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿ ಮೊದಲ ಕೃಷಿ ಬಜೆಟ್ ಮಂಡಿಸಲಾಯಿತು. ಮೊದಲ ಬಾರಿಗೆ ಅವರು ಬೆಂಬಲ ಬೆಲೆ ಘೋಷಿಸಿದರು. ಅಲ್ಲದೆ ಸಾಲಮನ್ನಾ ಮಾಡಿದ್ದರು ಎಂದು ವಿವರಿಸಿದರು.
ಬಸವರಾಜ ಬೊಮ್ಮಾಯಿ ಅವರ ಸರಕಾರವು ದೇಶದಲ್ಲೇ ಮೊದಲ ಬಾರಿಗೆ ರೈತ ವಿದ್ಯಾನಿಧಿಯನ್ನು ಪ್ರಕಟಿಸಿ ಬೆಂಬಲಿಸಿದ್ದಾರೆ. ಕ್ಷೀರ ಅಭಿವೃದ್ಧಿ ಬ್ಯಾಂಕನ್ನೂ ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಆರಂಭಿಸಲಾಗಿದೆ ಎಂದು ಶ್ಲಾಘಿಸಿದರು. ಕಾಂಗ್ರೆಸ್‍ಗೆ ರೈತರ ಶಾಪ ತಟ್ಟಿದೆ. ಸಿದ್ರಾಮಣ್ಣ ಮುಖ್ಯಮಂತ್ರಿ ಆಗಿದ್ದಾಗ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು. ಗೋಹಂತಕರಿಗೆ ಕಾಂಗ್ರೆಸ್ ಸರಕಾರ ರಕ್ಷಣೆ ನೀಡಿತು. ಅಲ್ಪಸಂಖ್ಯಾತ ಓಟ್‍ಬ್ಯಾಂಕ್‍ಗಾಗಿ ಟಿಪ್ಪು ಜಯಂತಿ ಯೋಚನೆ ಮಾಡಿದರು. ರೈತರ ಜೀವನಮಟ್ಟ ಸುಧಾರಿಸಲು ಮುಂದಾಗಲಿಲ್ಲ ಎಂದು ಟೀಕಿಸಿದರು.
ಸಂಕಷ್ಟಗಳು ಬಂದಾಗ ದೇಶ ರಕ್ಷಿಸಿದ ಸಂಘಟನೆ ಆರೆಸ್ಸೆಸ್ ಎಂದ ಅವರು, ಆರೆಸ್ಸೆಸ್‍ನ ಹೆಸರು ಎತ್ತುವ ನೈತಿಕತೆ ಸಿದ್ದರಾಮಯ್ಯನವರಿಗೆ ಇಲ್ಲ. ಸಮಾಜವಾದದ ಹೆಸರಿನಲ್ಲಿ ಮಜಾವಾದ ಮಾಡಿದವರು ನೀವು ಎಂದು ಟೀಕಿಸಿದರು. ಒಡೆದು ಆಳುವ ನೀತಿ ಜಾರಿಗೊಳಿಸಿದ ಸಿದ್ದರಾಮಯ್ಯಗೆ ರೈತರ ಶಾಪ ತಟ್ಟುತ್ತಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಕೇಂದ್ರದ ಕೃಷಿ ಕಾಯಿದೆಗಳ ಕುರಿತು ಜನರಿಗೆ ಅರಿವು ನೀಡಲು ಎರಡು ಬಾರಿ ಪ್ರವಾಸ ಮಾಡಲಾಗಿದೆ. ಮೂರನೇ ಪ್ರವಾಸದಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಕುರಿತು ಮಾಹಿತಿ ನೀಡಲಾಗಿದೆ. 10ಕ್ಕೂ ಹೆಚ್ಚು ಜಿಲ್ಲೆಗಳ ನಾಲ್ಕನೇ ಸುತ್ತಿನ ಪ್ರವಾಸ ಮುಗಿದಿದೆ ಎಂದರು.
ಸಿರಿಧಾನ್ಯಗಳ ಬೆಳೆ, ಮೌಲ್ಯವರ್ಧನೆ, ಸಬ್ಸಿಡಿ ಕುರಿತು ತಜ್ಞರಿಂದ ಮಾಹಿತಿ ಕೊಡಿಸಲಾಗಿದೆ. ಕೃಷಿ ವಿಶ್ವವಿದ್ಯಾನಿಲಯಗಳಿಗೆ ಭೇಟಿ ಕೊಟ್ಟು ವಿಜ್ಞಾನಿಗಳ ಜೊತೆ ಚರ್ಚೆ ಮಾಡಿದ್ದೇವೆ. ಕೃಷಿ ವಿಜ್ಞಾನ ಕೇಂದ್ರಗಳಿಗೂ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಕೃಷಿಕರು, ವ್ಯವಸಾಯಗಾರರಿಗಾಗಿ ಮೋರ್ಚಾ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಲೋಕಸಭಾ ಸದಸ್ಯ ಎಸ್. ಬಸವರಾಜ್, ಶಾಸಕರಾದ ಜ್ಯೋತಿ ಗಣೇಶ್, ಪಕ್ಷದ ಜಿಲ್ಲಾ ಅಧ್ಯಕ್ಷ ಹೆಚ್.ಎಸ್. ರವಿಶಂಕರ್ ಅವರು ಉಪಸ್ಥಿತರಿದ್ದರು. ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಶಿವಪ್ರಸಾದ್, ಎಸ್. ಗುರುಲಿಂಗನಗೌಡ, ಜಿಲ್ಲಾ ಅಧ್ಯಕ್ಷ ಆರ್.ಎಸ್. ಶಿವಶಂಕರ್ ಬಾಬು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!