ಏಲಿಯನ್‌ಗಳ ಆಕರ್ಷಿಸಲು ಮಾನವರ ನಗ್ನಚಿತ್ರ, ಭೂಮಿ ವಿಳಾಸ ಕಳುಹಿಸುತ್ತಿದೆ ನಾಸಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅನ್ಯಗ್ರಹ ಜೀವಿಗಳನ್ನು ಆಕರ್ಷಿಸಲು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ವಿಜ್ಞಾನಿಗಳು ವಿಭಿನ್ನ ತಂತ್ರವೊಂದನ್ನು ಅನುಸರಿಸಲು ಮುಂದಾಗಿದ್ದಾರೆ. ಅದೇನು ವಿಚಾರ ಎಂದು ತಿಳಿದರೆ ಅಚ್ಚರಿಯಾಗುವುದು ಗ್ಯಾರೆಂಟಿ. ನಾಸಾ ಮಾನವರ ನಗ್ನ ಚಿತ್ರಗಳನ್ನು ಬಾಹ್ಯಾಕಾಶಕ್ಕೆ ರವಾನಿಸಲು ಸಿದ್ಧತೆ ನಡೆಸಿದೆ. ಈ ಚಿತ್ರಗಳು ಸಂದೇಶ ರವಾನಿಸಿರುವ ಜೀವಿಗಳು ಹೇಗಿದ್ದಾರೆ ಎಂಬುದರ ಕುರಿತಾಗಿ ಅನ್ಯಗ್ರಹ ಜೀವಿಗಳಿಗೆ ಸ್ಪಷ್ಟ ಕಲ್ಪನೆಯನ್ನು ನೀಡುತ್ತದೆ. ಈ ಮೂಲಕ ಏಲಿಯನ್‌ ಗಳನ್ನು ಆಕರ್ಷಿಸಬಹುದು, ಅವರೊಂದಿಗೆ ಸಂಪರ್ಕವನ್ನೂ ಸಾಧಿಸಲು ಸಾಧ್ಯವಿದೆ ಎನ್ನುತ್ತಾರೆ ವಿಜ್ಞಾನಿಗಳು.
‘ಬೀಕನ್ ಇನ್ ದಿ ಗ್ಯಾಲಕ್ಸಿ’ (ಬಿಐಟಿಜಿ) ಎಂಬ ಯೋಜನೆಯ ಅಡಿಯಲ್ಲಿ ವಿಜ್ಞಾನಿಗಳು ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. ಗಣಿತ ಶಾಸ್ತ್ರ ಸಂಕೇತಗಳನ್ನು ಆಧರಿಸಿದ ಬೈನರಿ ಕೋಡ್‌ ಆಧಾರಿತ ಸಂದೇಶಗಳನ್ನು ಇದರೊಂದಿಗೆ ರವಾನೆ ಮಾಡಲಾಗುತ್ತಿದ್ದು, ಈ ಸಂದೇಶಗಳಲ್ಲಿ ಭೂಮಿಯ ಮೇಲಿನ ಜೀವರಾಸಾಯನಿಕ ಸಂಯೋಜನೆ, ವಿಶ್ವದಲ್ಲಿ ನಮ್ಮ ಸೌರವ್ಯೂಹದ ಡಿಜಿಟಲೈಸ್ಡ್ ಚಿತ್ರಣ, ಸ್ಥಾನ ಮತ್ತು ಭೂಮಿಯ ಮೇಲ್ಮೈನ ಚಿತ್ರಣದಂತಹ ಹಲವಾರು ಚಿತ್ರಣಗಳನ್ನು ಒಳಗೊಂಡಿರುತ್ತವೆ. ಇದರ ಜೊತೆಗೆ ಸಂದೇಶವು ಮಾನವರ ಡಿಎನ್‌ಎ ರಚನೆಗಳ ಚಿತ್ರಣವನ್ನು ಸಹ ಒಳಗೊಂಡಿದೆ. ಇದು ಅನ್ಯಗ್ರಹ ಜೀವಿಗಳಿಗೆ ಮಾನವರ ಕುರಿತಾಗಿ ಸ್ಪಷ್ಟ ಕಲ್ಪನೆಯನ್ನು ಒದಗಿಸುತ್ತದೆ.
ಅನ್ಯಗ್ರಹ ಜೀವಿಗಳು ಬಿಐಟಿಜಿ ಸಂದೇಶಗಳನ್ನು ಸ್ವೀಕರಿಸಿ ನಮ್ಮನ್ನು ಸಂಪರ್ಕಿಸಲು ಯತ್ನಿಸಿದರೆ, ಅವರಿಗೆ ನಮ್ಮ ಸೌರವ್ಯೂಹದ ವಿಳಾಸವನ್ನು ಸಹ ನೀಡಲಾಗಿರುತ್ತದೆ. ಡಿಜಿಟಲ್ ಫೋಟೋದಲ್ಲಿ ಭೂಮಿಯನ್ನು ಕೇಂದ್ರವಾಗಿಸಿಕೊಂಡು ಕ್ಷೀರಪಥದಲ್ಲಿ ನಮ್ಮ ಸೂರ್ಯನ ಸ್ಥಾನ, ಅದರ ಸುತ್ತಲೂ ಇತರ ಗ್ರಹಗಳು ಸುತ್ತುತ್ತಿರುವ ಸೌರವ್ಯೂಹದ ಸಂಪೂರ್ಣ ನಕ್ಷೆಯನ್ನು ರವಾನಿಸಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!