ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ತಿಂಗಳ 9 ಮತ್ತು 10 ರಂದು ನಡೆಯಲಿರುವ ಜಿ20 ಶೃಂಗಸಭೆಗೆ ಪ್ರತಿನಿಧಿಗಳನ್ನು ಸ್ವಾಗತಿಸಲು ರಾಷ್ಟ್ರ ರಾಜಧಾನಿ ಸಜ್ಜಾಗಿದೆ.
“ವಸುದೈವ ಕುಟುಂಬಕಂ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ” G20 ಥೀಮ್‌ನೊಂದಿಗೆ ಧೌಲಾ ಕುವಾನ್ ಸಿಂಗಾರಗೊಂಡಿದೆ. NH-48 ನಲ್ಲಿನ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿರುವ ಟ್ರಿಜಂಕ್ಷನ್‌ನಲ್ಲಿ “ವಿಘ್ನೇಶ್ವರನ” ಶಿಲ್ಪ ಎಲ್ಲರನ್ನೂ ಆಕರ್ಷಿಸುತ್ತಿದೆ.
ಕಾರ್ಯಕ್ರಮದ ಮುಖ್ಯ ಸ್ಥಳವಾದ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪವನ್ನು ಸಸ್ಯಗಳು, ಹೂವುಗಳು ಮತ್ತು ಇತರ ವಸ್ತುಗಳಿಂದ ಅಲಂಕರಿಸಲಾಗಿದೆ. 28 ಅಡಿ ಎತ್ತರದ ನಟರಾಜನ ಪ್ರತಿಮೆಯೂ ರಾತ್ರಿಯಲ್ಲಿ ಮಿನುಗುತ್ತಿತ್ತು.
ಜಿ 20 ಶೃಂಗಸಭೆ ಹಿನ್ನೆಲೆ ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಪೊಲೀಸರು ಸತತ ಎರಡನೇ ದಿನವೂ ವಾಹನ ತಪಾಸಣೆ ಮುಂದುವರೆಸಿದ್ದಾರೆ. ಮಂಗಳವಾರ ರಾತ್ರಿ ಮತ್ತು ಬುಧವಾರದ ಮುಂಜಾನೆ ನಡುವೆ ಯೂಸುಫ್ ಸರಾಯ್‌ನಲ್ಲಿ ತಪಾಸಣೆ ನಡೆಸಲಾಯಿತು. ಪೊಲೀಸ್ ಸಿಬ್ಬಂದಿ ವಾಹನಗಳನ್ನು ತಡೆದು ಕೂಲಂಕುಷ ತಪಾಸಣೆ ನಡೆಸುತ್ತಿರುವುದು ಕಂಡು ಬಂತು.
ರಾಷ್ಟ್ರ ರಾಜಧಾನಿಯ ತಿಲಕ್ ಸೇತುವೆಯಲ್ಲಿ ದೆಹಲಿ ಪೊಲೀಸ್‌ನ ಹಿರಿಯ ಅಧಿಕಾರಿಯೊಂದಿಗೆ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ಖಲಿಸ್ತಾನಿ ಶಕ್ತಿಗಳು ಈ ಪ್ರದೇಶದಲ್ಲಿ ಶಾಂತಿ ಹಾಳುಮಾಡುವ ಬೆದರಿಕೆ ಹಾಕಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಿಯೋಜಿಸಲಾಗಿದೆ.
ಮಂಗಳವಾರ ದೆಹಲಿ ಪೊಲೀಸ್ ವಿಶೇಷ ಆಯುಕ್ತ, ಕಾನೂನು ಮತ್ತು ಸುವ್ಯವಸ್ಥೆ ದೇವೇಂದ್ರ ಪಾಠಕ್ ಸಭೆ ನಡೆಸಿ, “ಜಿ20 ಪ್ರತಿಷ್ಠಿತ ಶೃಂಗಸಭೆ. ಇದು ಭಾರತ ಮತ್ತು ದೆಹಲಿಗೆ ಹೆಮ್ಮೆಯ ವಿಷಯ. ದೆಹಲಿ ಪೊಲೀಸರು ಸುರಕ್ಷತೆ, ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಯ ಕೇಂದ್ರೀಕೃತ ಜವಾಬ್ದಾರಿಯನ್ನು ಹೊಂದಿದ್ದು, ಅದನ್ನು ಸವಾಲಾಗಿ ತೆಗೆದುಕೊಳ್ಳುತ್ತಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಕಲ ಬಂದೋಬಸ್ತ್ ವ್ಯವಸ್ಥೆ ಮಾಡುತ್ತಿರುವುದಾಗಿ ತಿಳಿಸಿದರು.